ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೃಹ ಸಚಿವರ ರಾಜೀನಾಮೆಗೆ ಕೆ. ಉದಯಕುಮಾರ್ ಶೆಟ್ಟಿ ಆಗ್ರಹ
(Udupi) ಉಡುಪಿ; ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಯ ನೆನಪು ಮಾಸುವ ಮುನ್ನ ಅದೇ ಮಾದರಿಯಲ್ಲಿ ಹುಬ್ಬಳ್ಳಿಯ ವೀರಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯ ಕೊಲೆಯಾಗಿದೆ. ಈ ಘಟನೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಹತ್ಯೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸದ ರಾಜ್ಯ ಗೃಹ ಸಚಿವರು ತಕ್ಷಣ ರಾಜಿನಾಮೆ ಸಲ್ಲಿಸಬೇಕು ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಅಭಿವೃದ್ಧಿಯನ್ನು ಮರೆತಿರುವ ಜೊತೆಗೆ ಕನಿಷ್ಠ ಪಕ್ಷ ರಾಜ್ಯದ ಜನತೆಯ ಪ್ರಾಣ ರಕ್ಷಣೆಗೂ ಬೆಲೆ ನೀಡುತ್ತಿಲ್ಲ ಎಂದು ಅವರು ತಿಳಿಸಿದರು.
ಹುಬ್ಬಳ್ಳಿಯ ವೀರಾಪುರದ 21 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಗಿರೀಶ್ ಅಲಿಯಾಸ್ ವಿಶ್ವ ಎಂ. ಸಾವಂತ್ ಎಂಬಾತ ಮೇ 15ರ ಮುಂಜಾನೆ ಆಕೆಯನ್ನು ಮನೆಯ ಹೊಸ್ತಿಲಲ್ಲೇ ಬರ್ಬರವಾಗಿ ಹತ್ಯೆಗೈದಿರುವುದು ನಾಗರಿಕ ಸಮಾಜವನ್ನು ಮತ್ತೊಮ್ಮೆ ಭಯಭೀತಿಯಲ್ಲಿ ನಲುಗುವಂತೆ ಮಾಡಿದೆ.
ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಸಾಮಾನ್ಯ ಘಟನೆ ಎಂದಿರುವ ಗೃಹ ಸಚಿವರು ಮತ್ತು ರಾಜ್ಯ ಸರಕಾರದ ಲಘು ಹೇಳಿಕೆಗಳು ಹಾಗೂ ಆರೋಪಿಯ ವಿರುದ್ಧ ಯಾವುದೇ ಕಠಿಣ ಕ್ರಮ ಜರಗಿಸದೇ ಇರುವುದು ಇಂತಹ ಹೇಯ ಕೃತ್ಯಗಳ ಪುನರಾವರ್ತನೆಗೆ ಮುಖ್ಯ ಕಾರಣವಾಗಿದೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ವಿಜಯಕುಮಾರ್ ಉದ್ಯಾವರ ಮತ್ತು ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

