ರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರೇ, ಮೊದಲು ನಿಮ್ಮ ನಡೆಗೆ ಉತ್ತರ ನೀಡಿ : ಪ್ರಬೋಧ್ ಚಂದ್ರ ಹೆಜಮಾಡಿ
ಕಾಪು ಬಿಜೆಪಿ ಮಂಡಲದ ಮುಖಂಡ ಶರಣ್ ಕುಮಾರ್ ಮಟ್ಟು ಪ್ರತಿಕ್ರಿಯೆಗೆ ಕೌಂಟರ್
(Padubidri) ಪಡುಬಿದ್ರಿ: ಕಾಪು ಬಿಜೆಪಿ ಮಂಡಲದ ಮುಖಂಡ ಶರಣ್ ಕುಮಾರ್ ಮಟ್ಟು ಅವರೇ, ಧರ್ಮದ ಹೆಸರಿನಲ್ಲಿ ಇತರರಿಗೆ ನೀತಿ-ನೈತಿಕತೆಯ ಪಾಠ ಹೇಳುವ ಮೊದಲು, ನಿಮ್ಮ ಪಕ್ಷದೊಳಗೆ ಜನರ ಮುಂದೆ ಉದ್ಭವಿಸಿರುವ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರದ ಕಾಣಿಕೆ ಹುಂಡಿ ಕಳವು ಪ್ರಕರಣದ ಕುರಿತು ವಿವಿಧ ಮಾಧ್ಯಮಗಳಲ್ಲಿ ವರದಿಗಳು ಮತ್ತು ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಸಂಪೂರ್ಣ ಸತ್ಯಾಂಶ ಹೊರಬರಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಕಾನೂನಿನ ಪ್ರಕಾರ ನಿಷ್ಪಕ್ಷಪಾತ ತನಿಖೆ ನಡೆದು ಸೂಕ್ತ ಕ್ರಮ ಕೈಗೊಳ್ಳಬೇಕು.
ಕೋಟ್ಯಂತರ ಭಾರತೀಯರ ಆರಾಧ್ಯದೈವ ಶ್ರೀ ರಾಮಚಂದ್ರರು ಯಾವುದೇ ರಾಜಕೀಯ ಪಕ್ಷದ ಆಸ್ತಿಯಲ್ಲ. ಶ್ರೀರಾಮನ ಆದರ್ಶಗಳು ಸತ್ಯ, ಧರ್ಮ, ನ್ಯಾಯ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದ್ದು, ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಪ್ರಯತ್ನವನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಇತರರಿಗೆ ಧರ್ಮದ ಪಾಠ ಹೇಳುವ ಮೊದಲು ತಮ್ಮ ಪಕ್ಷದೊಳಗಿನ ಪ್ರಶ್ನೆಗಳಿಗೂ ಉತ್ತರಿಸುವ ನೈತಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು. ಜನರ ಧಾರ್ಮಿಕ ಭಾವನೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಜನತೆ ಸೂಕ್ತವಾಗಿ ಮೌಲ್ಯಮಾಪನ ಮಾಡುತ್ತಾರೆ.
ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಇಂತಹ ದ್ವಂದ್ವ ನೀತಿ ಹಾಗೂ ಜನರನ್ನು ದಿಕ್ಕು ತಪ್ಪಿಸುವ ರಾಜಕೀಯವನ್ನು ತೀವ್ರವಾಗಿ ಖಂಡಿಸುತ್ತದೆ. ಸತ್ಯ, ನ್ಯಾಯ ಮತ್ತು ಪಾರದರ್ಶಕ ಆಡಳಿತದ ಪರವಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದೂ ಪ್ರಭೋದ್ ಹೇಳಿದ್ದಾರೆ.

