ರೌಡಿಶೀಟರ್ ಸತೀಶ್ ಪೂಜಾರಿಗೆ ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧ
(Udupi) ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತ ಕಾಪಾಡುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆ ಕೆಟಿಜೆ ನಗರ ನಿವಾಸಿ ರೌಡಿಶೀಟರ್ ಸತೀಶ್ ಪೂಜಾರಿಗೆ ಜು.7ರಿಂದ ಸೆ.9ರ ವರೆಗೆ ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ವತಿಯಿಂದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಕಾರ್ಕಳ, ಕುಂದಾಪುರ ಹಾಗೂ ಉಡುಪಿ ತಾಲೂಕಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಜು.7ರಂದು ಸಂಜೆ 4 ಗಂಟೆಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುವ ಸಭೆಗೆ ಪ್ರಮುಖ ಭಾಷಣಕಾರರಾಗಿ ರೌಡಿಶೀಟರ್ ಸತೀಶ್ ಪೂಜಾರಿಯನ್ನು ಕರೆಯುವ ಸಿದ್ಧತೆಯಾಗಿದೆ. ಪ್ರಚೋದನಾಕಾರಿ ಭಾಷಣ ಮಾಡಿ ಗಲಭೆ ಎಬ್ಬಿಸುವ ಹುನ್ನಾರದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಸತೀಶ್ ಪೂಜಾರಿ ವಿರುದ್ಧ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರದಿ ಆಧರಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

