ಕಾಪು ತಾಲೂಕಿನ ಎಲ್ಲೂರು ಕೆಮ್ಮುಂಡೇಲು ನಿವಾಸಿ ನಿಕಿತಾ ಎಂಬ ವಿದ್ಯಾರ್ಥಿನಿಯು ಆಸ್ಪತ್ರೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಎಬಿವಿಪಿ ಸಂಘಟನೆ ಇಂದು ಉಡುಪಿಯಲ್ಲಿ ಆಸ್ಪತ್ರೆಗೆ ಮುತ್ತಿಗೆ ಹಾಕಲು ಯತ್ನಿಸಿತು.
ನಿಕಿತಾ ಸಾವಿಗೀಡಾದ ಉಡುಪಿಯ ಸಿಟಿ ಹಾಸ್ಪಿಟಲ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ಎಬಿವಿಪಿ , ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಬಂದ ವಿದ್ಯಾರ್ಥಿಗಳನ್ನು ಪೊಲೀಸರು ರಸ್ತೆಯಲ್ಲೇ ತಡೆದು ನಿಲ್ಲಿಸಿದರು. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.
ಕಳೆದ ಭಾನುವಾರ ಬೆಳಿಗ್ಗೆ ನಗರದ ಸಿಟಿ ಆಸ್ಪತ್ರೆಯಲ್ಲಿ ನಿಕಿತಾ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದರು.
ನಿಕಿತಾ, ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾದ್ದಾಳೆ ಎಂದು ಆಕೆಯ ಮನೆಯವರು ನೇರವಾಗಿ ಆರೋಪ ಹೊರಿಸಿದ್ದಾರೆ. ಈ ಕುರಿತು ಆಸ್ಪತ್ರೆಯ ವಿರುದ್ಧ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

