ಸಂಸದ ತೇಜಸ್ವಿ ಸೂರ್ಯ ದಂಪತಿ : ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ, ದುರ್ಗಾ ಸ್ತುತಿಯೊಂದಿಗೆ ಮಾರಿಯಮ್ಮನ ಪ್ರಾರ್ಥಿಸಿದ ಗಾಯಕಿ ಶಿವಶ್ರೀ
(Kaup) ಕಾಪು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತವರ ಪತ್ನಿ ಗಾಯಕಿ ಶಿವಶ್ರೀಯವರು ಭಾನುವಾರ ಸಂಜೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಅಮ್ಮನ ದರುಶನ ಪಡೆದರು.
ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಸಮ್ಮುಖದಲ್ಲಿ ದಂಪತಿಗಳಿಗೆ ಅಮ್ಮನ ಅನುಗ್ರಹ ಪ್ರಸಾದವನ್ನು ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ನೀಡಿದರು.
ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ದುರ್ಗಾ ಸ್ತುತಿಯನ್ನು ಹಾಡಿದರು.
ದೇವಳದ ಶಿಲ್ಪಕಲೆಯ ಕೆತ್ತನೆಯ ವೈಭವವನ್ನು ಕಂಡು ಆಶ್ಚರ್ಯಚಕಿತರಾಗಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಧವ ಆರ್. ಪಾಲನ್, ಯೋಗೀಶ್ ವಿ. ಶೆಟ್ಟಿ, ಸುನಿಲ್ ಎಸ್. ಪೂಜಾರಿ, ಗೀತಾಂಜಲಿ ಎಂ. ಸುವರ್ಣ, ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಸಂಚಾಲಕಿ ಅನಿತಾ ಹೆಗ್ಡೆ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
