ಸೌಜನ್ಯ ಪರ ಹೋರಾಟಗಾರರಿಂದ “ನೋಟಾ” ಅಭಿಯಾನ?
(Mangaluru) ಮಂಗಳೂರು: ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರರು ಮತ್ತು ಸೌಜನ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಲಕ್ಷಾಂತರ ಮಂದಿ ರಾಜಕೀಯವಾಗಿ ಯಾರಿಗೂ ಮತ ನೀಡದೆ “ನೋಟಾ” ಬಟನ್ ಒತ್ತುವುದಾಗಿ ಹೇಳಿಕೊಂಡಿದ್ದಾರೆ.
ಇದೀಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ʼನೋಟಾʼ ಅಭಿಯಾನದ ಘೋಷಣೆಯ ಸದ್ದು ಕೇಳಿಬರುತ್ತಿದ್ದು, ಈ ಬಾರಿ ನಾವು ಯಾವ ಅಭ್ಯರ್ಥಿಗೂ ಮತ ನೀಡುವುದಿಲ್ಲ. ನಮ್ಮ ಮತ ‘ನೋಟಾ’ಗೆ ಸೌಜನ್ಯ ಪರ ಹೋರಾಟಗಾರರು ಹೇಳುತ್ತಿದ್ದಾರೆ.
ಯಾವ ಅಭ್ಯರ್ಥಿಗಳು ಕೂಡಾ ತನಗೆ ಸೂಕ್ತ ಅಲ್ಲ ಅನ್ನುವ ಸಂದರ್ಭದಲ್ಲಿ ‘ನೋಟಾ’ ಮತ ಚಲಾಯಿಸಲಾಗುತ್ತದೆ.
ಈಗಾಗಲೇ ದೇಶಾದ್ಯಂತ ಪ್ರತಿಭಟನೆ ಮೂಲಕ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಯುವತಿಯ ಮಾನ ಹರಣಗೊಳಿಸಿ ಬರ್ಬರ ಹತ್ಯೆಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಲಾಗಿತ್ತು.
“ಈ ಕೊಲೆಯನ್ನು ಮುಚ್ಚಿ ಹಾಕಲು ಧರ್ಮಸ್ಥಳದ ಪ್ರಭಾವಿಗಳು ಕಳೆದ 12 ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ನಮಗೆ ಈ ಸಲ ಯಾವ ರಾಜಕೀಯ ಪಕ್ಷವೂ ಬೇಡ, ಸೌಜನ್ಯ ಹೋರಾಟಕ್ಕೆ ಬೆಂಬಲ ಕೊಡುವ ಪಕ್ಷ ಯಾವುದೂ ಇಲ್ಲದೆ ಹೋದರೂ ಸರಿ, ನಾವು ದೇಶದಲ್ಲಿ ಒಂದು ವಿಶಿಷ್ಟವಾದಂತಹ ಹೋರಾಟವನ್ನು ಕೈಗೊಳ್ಳುತ್ತಿದ್ದೇವೆ. ಈ ಸಲ ಲಕ್ಷಾಂತರ ಮತಗಳನ್ನು ನೋಟಾಗೆ ಹಾಕಿಸುವ ಮೂಲಕ ದೇಶದ ಸಂಸತ್ತನ್ನು, ದೇಶದ ಹಲವಾರು ರಾಜ್ಯಗಳ ಹೋರಾಟಗಾರರನ್ನು, ಸುಪ್ರೀಂಕೋರ್ಟ್ ನ್ನು ಮತ್ತು ವಿದೇಶಗಳ ಸರ್ಕಾರಗಳನ್ನು ಕೂಡಾ ಗಮನ ಸೆಳೆಯಬೇಕು ಎನ್ನುವ ಉದ್ದೇಶದಿಂದ ಸೌಜನ್ಯಾಳಿಗಾಗಿ ನೋಟ ಅಭಿಯಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ”.
ಕಳೆದ ಬಾರಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 7,74,284 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಿಥುನ್ ರೈ ಯವರನ್ನು ಸೋಲಿಸಿದ್ದರು. ಇಲ್ಲಿಯತನಕ ಸೌಜನ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡವರ ಸಂಖ್ಯೆ ಏಳು ಲಕ್ಷಕ್ಕೂ ಅಧಿಕವಿದೆ ಎಂಬ ಮಾಹಿತಿಯಿದೆ. ಈ ಅಂಕಿ ಅಂಶವನ್ನು ನೋಡಿದರೆ, ಅಭ್ಯರ್ಥಿ ಪಡೆಯುವ ಮತಗಳಿಗಿಂತಲೂ ನೋಟಾ ಮತಗಳೇ ಅಧಿಕವಾಗುವ ಸಂಭವ ಇದೆ.
ಎಲ್ಲಾ ಪಕ್ಷಗಳು ಸೌಜನ್ಯ ಹೋರಾಟಗಾರರ ಮನ ಒಲಿಕೆಗೆ ಪ್ರಯತ್ನ ಪಡುವುದು ಖಚಿತ. ಆದರೂ, ಹೋರಾಟಗಾರು ತಮ್ಮ ಮನ ಪರಿವರ್ತನೆ ಮಾಡುತ್ತಾರೆಯೇ, ಇಲ್ಲವೇ ಎಂದು ಕಾದು ನೋಡಬೇಕಿದೆ.

