
ಹೈನುಗಾರರ ಶ್ರೇಯೋಭಿವೃದ್ಧಿಗೆ ನಾವು ಬದ್ಧ : ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು
ಬೆಳಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸಂಘದ ಸದಸ್ಯರಿಗೆ 25% ಡಿವಿಡೆಂಡ್ (Annual General Meeting of Belapu Milk Producers Cooperative Association, 25% dividend for association members)
(Belapu) ಬೆಳಪು : ಬೆಳಪು ಹಾಲು ಉತ್ಪಾದಕರ ಸಂಘ ಕಳೆದ 37 ವರ್ಷದಿಂದ ಹೈನುಗಾರರ ಸೇವೆ ಸಲ್ಲಿಸುತ್ತಿದ್ದು, ಉತ್ತಮ ಲಾಭಾಂಶವನ್ನು ಹೊಂದಿ ಹೈನುಗಾರರ ಶ್ರೇಯೋಭಿವೃದ್ಧಿಗೆ ಬದ್ಧರಾಗಿ ಪ್ರಸಕ್ತ ವರ್ಷ ಸಂಘದ ಸದಸ್ಯರಿಗೆ 25% ಡಿವಿಡೆಂಡ್ ಘೋಷಿಸಲಾಗಿದೆಂದು ಸೋಮವಾರ ನಡೆದ ಸಂಘದ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬೆಳಪು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಎಂ.ಎಫ್ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ನಮ್ಮ ಸಂಘವು 1988ರಲ್ಲಿ ದಿನವೊಂದಕ್ಕೆ 15 ಲೀಟರ್ ಹಾಲಿನಿಂದ ಪ್ರಾರಂಭಗೊಂಡು, ಆಗ ನಾನು ಇದರ ಪ್ರಥಮ ನಿರ್ದೇಶಕನಾಗಿದ್ದೆ. ಇದೀಗ 950 ಲೀಟರ್ ಹಾಲು ಹೈನುಗಾರರಿಂದ ಸಂಗ್ರಹವಾಗುತ್ತಿದ್ದು, ಲಾಭಾಂಶದ 65%ರಷ್ಟು ಹಾಲು ನೀಡುವವರಿಗೆ ಬೋನಸ್ ನೀಡುತ್ತಿದ್ದು, ಅದರೊಂದಿಗೆ ಅತೀ ಹೆಚ್ಚು ಹಾಲು ಕೊಡುವವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದ್ದು, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಪ್ರತಿವರ್ಷ ನೀಡಲಾಗುವುದು. ಸಂಘದಲ್ಲಿ ಹಾಲು ಉತ್ಪಾದಕರ ಶೇಖರಣಾ ಘಟಕವಿದ್ದು, ಮುಂದೆ ಹೈನುಗಾರರಿಗೆ ದನಗಳ ಮೇವು, ಹಿಂಡಿ, ಪೌಷ್ಟಿಕಾಂಶದ ಆಹಾರಕ್ಕೆ ಸಂಘವು ಹೆಚ್ಚಿನ ಆದ್ಯತೆ ನೀಡಲಿದೆ. ಸಂಘಗಳು ಹೆಚ್ಚು ಹಾಲು ಶೇಖರಣೆ ಮಾಡಿದಾಗ ಮಾತ್ರ ನಮ್ಮ ಒಕ್ಕೂಟ ಅಭಿವೃದ್ಧಿಯಾಗಲು ಸಾಧ್ಯ. ಹಾಲು ಉತ್ಪಾದಕರ ಸಂಘಗಳೇ ನಮ್ಮ ಅಡಿಪಾಯವೆಂದ ಅವರು, ಸಂಘ ಪ್ರಾರಂಭವಾದ ನಂತರ ಪ್ರಥಮ ಬಾರಿಗೆ ನಮ್ಮ ಸದಸ್ಯರಿಗೆ 25% ಡಿವಿಡೆಂಡ್ ನೀಡುತ್ತಿದೆಂದರು.
ದನ ಖರೀದಿಸಲು 3%ನಲ್ಲಿ ಸಹಕಾರಿ ಸಂಘದಲ್ಲಿ ಸಾಲ
ಉತ್ತಮ ಹೈನುಗಾರಿಕೆಯಿಂದ ಒಂದು ಕುಟುಂಬದ ಜೀವನ ನಿರ್ವಹಣೆ ಸಾಧ್ಯ. ಗೋಮಾತೆ ನೀಡುವ ಎಲ್ಲಾ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ನಮ್ಮ ಸಂಘದ ವ್ಯಾಪ್ತಿಯ ರೈತರು ಪಶು ಖರೀದಿಸುವುದಾದರೆ 3% ನಲ್ಲಿ ಸಾಲ ನೀಡಲು ಬೆಳಪು ಸೇವಾ ಸಹಕಾರಿ ಸಂಘ ಸಿದ್ಧವಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರು ದನ ಖರೀದಿಸಿದರೆ ಬೆಳಪು ಗ್ರಾಮ ಪಂಚಾಯತ್ ವತಿಯಿಂದ ರೂ.10,000/- ಸಹಾಯಧನ ನೀಡಲಾಗುವುದು. ನಮ್ಮ ಸಂಘದಲ್ಲಿ ಹೈನುಗಾರಿಕೆಯ ಕ್ರಾಂತಿಯಾಗಬೇಕೆಂದರು. ನಾನು ಸ್ವತಃ ಹೈನುಗಾರನಾಗಿ ಪಶು ಆರೈಕೆಯ ಕಷ್ಟಗಳನ್ನು
ಅರಿತುಕೊಂಡಿದ್ದೇನೆ. ಸಂಘಕ್ಕೆ ಪ್ರಸಕ್ತ ವರ್ಷ 45,011 ಲೀಟರ್ ಹಾಲು ನೀಡಿ ರೂ.16,00,011 ಪಡೆದಿರುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಹಾಗೂ ನನ್ನನ್ನು ಸಹಕಾರಿ ಕ್ಷೇತ್ರದಲ್ಲಿ ಬೆಳೆಸಿದ ನಮ್ಮ ಸಹಕಾರಿ ಧುರೀಣ ಡಾ. ಎಂ. ಎನ್.ರಾಜೇಂದ್ರಕುಮಾರ್ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಒಕ್ಕೂಟದ ನಿರ್ದೇಶಕನಾಗಿ ರಾಜ್ಯ ಕೆ.ಎಂ.ಎಫ್ನ ನಿರ್ದೇಶಕನಾಗುವ ಅವಕಾಶವಾಗಿದೆ. ಸಿಕ್ಕಿದ ಅವಕಾಶವನ್ನು ಹೈನುಗಾರರ ಶ್ರೇಯಸ್ಸಿಗಾಗಿ ಶ್ರಮಿಸುವುದರೊಂದಿಗೆ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಪ್ರಾಮಾಣಿಕ ಬೇಡಿಕೆಗೆ ಸ್ಪಂದಿಸುವ ಕಾರ್ಯ ಮಾಡುತ್ತೇನೆಂದು ಈ ಸಂದರ್ಭ ತಿಳಿಸಿದರು.
ಬೆಳಪು ಹಾಲು ಉತ್ಪಾದಕರ ಸಂಘದ ವತಿಯಿಂದ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪುರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕರಾದ ಡಾ. ರವಿರಾಜ್ ಉಡುಪ, ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ. ಮಾಧವ ಐತಾಳ, ಒಕ್ಕೂಟದ ವಿಸ್ತರಣಾಧಿಕಾರಿ ಅಬ್ದುಲ್ ಶಮೀರ್, ಸಂಘದ ಉಪಾಧ್ಯಕ್ಷ ಕೆ. ದಿನೇಶ್ ಶೆಟ್ಟಿ, ನಿರ್ದೇಶಕರಾದ ನರಸಿಂಹ ಜೆನ್ನಿ, ಚಂದ್ರಕಾಂತ ಶೆಟ್ಟಿ, ದಿನೇಶ್ ಪೂಜಾರಿ, ರಮೇಶ ದೇವಾಡಿಗ, ರಮಾನಂದ ಮೂಲ್ಯ, ದಿವಾಕರ ಶೆಟ್ಟಿ, ಗುರುರಾಜ ಆಚಾರ್ಯ, ಅಣ್ಣು ಮುಖಾರಿ, ಗೌರಿ ಶೆಟ್ಟಿ, ಶ್ರೀದೇವಿ ಪೂಜಾರಿ, ಬೆಳಪು ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸುಲೋಚನಾ ದೇವಾಡಿಗ ಉಪಸ್ಥಿತರಿದ್ದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಯಾದವರಾವ್ ಕಾರ್ಯಕ್ರಮ ನಿರ್ವಹಿಸಿ,ಸ್ವಾಗತಿಸಿದರು. ರಾಗವೇಂದ್ರ ಶೆಟ್ಟಿ ವಂದಿಸಿದರು.

