ಪಲ್ಲಿಪಾಡಿಯಲ್ಲಿ 75 ಕೋ.ರೂ.ವೆಚ್ಚದ “ರಾಮಕೃಷ್ಣ ವಿದ್ಯಾ ದೇಗುಲ“ಕ್ಕೆ ಭೂಮಿಪೂಜೆ
(Bantwala) ಬಂಟ್ಚಾಳ: ತಾಲೂಕಿನ ಪೊಳಲಿಯಲ್ಲಿರುವ ರಾಮಕೃಷ್ಣ ತಪೋವನ ವತಿಯಿಂದ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ಸುಮಾರು 75 ಕೋ. ರೂ.ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ “ರಾಮಕೃಷ್ಣ ವಿದ್ಯಾ ದೇಗುಲ”ಕ್ಕೆ ಭಾನುವಾರ ಭೂಮಿಪೂಜೆ ನೆರೆವೇರಿಸಲಾಯಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಅವರು ಶಿಲಾನ್ಯಾಸ ನೆರವೇರಿಸಿದರು.
ಅವರು ಆಶೀರ್ವಚನದಲ್ಲಿ, ಮಕ್ಕಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ನಿರ್ದಿಷ್ಠವಾದ ಗುರಿಯನ್ನು ಹೊಂದಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಿಸುವ ಮೂಲಕ ಮನಷ್ಯತ್ವದ ವ್ಯಕ್ತಿತ್ವವನ್ನು ನಿರ್ಮಿಸುವ ಕಾರ್ಯ ಆಗಬೇಕಿದೆ.
ಪರೀಕ್ಷೆಯನ್ನೇ ಗುರಿಯನ್ನಾಗಿಸಿ ಶಿಕ್ಷಣ ನೀಡುವಂತಾಗಬಾರದು. ಸ್ವಾಮೀ ವಿವೇಕಾನಂದರ ಆಶಯದಂತೆ ಸಮಾಜದಲ್ಲಿ ಆಶಾ ಮನೋಭಾವನೆಯ, ಉತ್ತಮ ಪ್ರಜೆಯಾಗಿ ವ್ಯಕ್ತಿತ್ವ ನಿರ್ಮಿಸುವ ಶಿಕ್ಷಣದ ಅಗತ್ಯವಿದೆ ಎಂದ ಸ್ವಾಮೀಜಿ, ಸರಸ್ವತಿ ಆರಾಧನೆಯ ಈ ವಿದ್ಯಾ ದೇಗುಲದಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಶ್ರದ್ದೆ ಮೂಡಿಸುವ ಕಾರ್ಯ ನಡೆಯಲಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಪ್ರಸ್ತುತ ಭಾರತ ನಿರ್ಣಾಯಕ ಕಾಲಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2047 ರ ವಿಕಸಿತ ಭಾರತದ ಕನಸಿಗೆ ಪೂರಕವಾಗಿ ಎಲ್ಲಾ ದಾರ್ಶನಿಕರ ಮಾತಿನಂತೆ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಕಾರ್ಯ ಈ ವಿದ್ಯಾದೇಗುಲದಲ್ಲಿ ಆಗಲಿ ಎಂದು ಹಾರೈಸಿದರಲ್ಲದೆ, ರಾಮಕೃಷ್ಣ ಮಠದ ಭಕ್ತನ ನೆಲೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರಸೆಯಿತ್ತರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್. ವಿನಯ್ ಹೆಗ್ಡೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.
ಬಡಗ ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ರೂಪಶ್ರೀ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧ ಲೋಕೇಶ್, ರಾಮಕೃಷ್ಣ ವಿದ್ಯಾ ದೇಗುಲದ ಸಮಿತಿ ಸದಸ್ಯರಾದ ಮಂಜುನಾಥ್ ಪ್ರಭು, ಡಾ. ಜಯಕರ ಮಾರ್ಲ, ಏಕನಾಥ್ ಪ್ರಭು, ಸುದೇಶ್ ರೈ, ಭುವನೇಶ್ ಪಚಿನಡ್ಕ, ಪಿ.ವಿ ರೈ, ಶರುಣ್ ಅಂಚನ್, ಆರ್ಕಿಟೆಕ್ಟ್ ನರೇಶ್ ಪೂಂಜ ಮೊದಲಾದವರು ಉಪಸ್ಥಿತರಿದ್ದರು.
ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಪ್ರಸ್ತಾವನೆಗೈದು, ಈ ವಿದ್ಯಾದೇಗುಲದಲ್ಲಿ ಎಲ್ ಕೆ ಜಿ ಯಿಂದ ಪ.ಪೂ.ವರೆಗಿನ ಆಂಗ್ಲ ಮಾಧ್ಯಮ ಶಿಕ್ಷಣವಿದ್ದು, ಪಿಯೂಸಿಗೆ ಸಿಬಿಎಸ್ ಸಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಗುರುಕುಲ ಮಾದರಿ ಶಿಕ್ಷಣ, ವಿದ್ಯಾರ್ಥಿಗಳಿಗೆ ವಸತಿ ಸಂಕೀರ್ಣ ಹಾಗೂ ಕೌಶಲ್ಯಾಭಿವೃದ್ಧಿ ಸಂಬಂಧಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ವಿವೇಕಾನಂದ ಹ್ಯೂಮನ್ ಸೆಂಟರ್ ಕಟ್ಟಡವು ಇಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.
ವಿದ್ಯಾದೇಗುಲದ ಸಮಿತಿ ಸದಸ್ಯ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

