ಅದಮಾರು ಪಿಪಿಸಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ
ದತ್ತಿ ಉಪನ್ಯಾಸ ಹಾಗೂ ವಿದ್ಯಾರ್ಥಿ ಮಂಡಳಿ ಉದ್ಘಾಟನೆ
(Adamaru) ಅದಮಾರು: ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ವಿಬುಧೇಶ ತೀರ್ಥ ಶ್ರೀಪಾದರ ಸಂಸ್ಮರಣೆ ಸಂಸ್ಥೆಯಲ್ಲಿ ನೆರವೇರಿತು.
ಇದೇ ಸಂದರ್ಭ ಎರ್ಮಾಳು ಬೀಡು ಅಶೋಕ್ ರಾಜ್ ರವರು ತನ್ನ ತಾಯಿಯ ಸ್ಮರಣಾರ್ಥ ಸ್ಥಾಪಿಸಿದ ದತ್ತಿ ಉಪನ್ಯಾಸ, ಇಸ್ರೋದ ನಿವೃತ್ತ ವಿಜ್ಞಾನಿ ಶ್ರೀಶ ಉಡುಪರು ತಮ್ಮ ತಂದೆಯ ಹೆಸರಲ್ಲಿ ನೀಡುವ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಮಂಡಳಿ ಉದ್ಘಾಟನಾ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಉಡುಪಿ ಅದಮಾರು ಮಠದ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅವರು ತಮ್ಮ ಆಶೀರ್ಚನದಲ್ಲಿ, ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ಸಂಸ್ಕೃತಿ ಹಾಗೂ ಜ್ಞಾನವನ್ನು ಗಳಿಸಿದರೆ, ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬದುಕಲು ಸಾಧ್ಯ. ವಿಬುಧೇಶ ತೀರ್ಥರು ಹಳ್ಳಿಯಾದ ಅದಮಾರಿನಲ್ಲೂ ಎಲ್ಲಾ ಗುಣಮಟ್ಟವುಳ್ಳ ಶ್ರೇಷ್ಠ ಶಿಕ್ಷಣ ಸಂಸ್ಥೆಯನ್ನು ಕಟ್ಟುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಪಥದಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು.
ದತ್ತಿ ಉಪನ್ಯಾಸವನ್ನು ಉಡುಪಿ ಪೂರ್ಣಪ್ರಜ್ಞ ಪದವಿ ಮಹಾವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಶ್ರೀಕಾಂತ್ ಸಿದ್ದಾಪುರ ನಡೆಸಿಕೊಟ್ಟರು. ಅವರು ಮಾತನಾಡಿ, ಶಿಕ್ಷಣದಲ್ಲಿ ಮೌಲ್ಯಗಳನ್ನು ಎಂದಿಗೂ ವಿಬುಧೇಶ ತೀರ್ಥರು ಬಿಟ್ಟುಕೊಟ್ಟವರಲ್ಲ. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಆಸ್ಥೆ ವಹಿಸದೆ ಜ್ಞಾನ ವಿಜ್ಞಾನ ಹಾಗೂ ಸಂಸ್ಕಾರಗಳಿಗೆ ಹೊತ್ತು ನೀಡಬೇಕು ಎಂದರು. ಅಲ್ಲದೆ ಸಂಸ್ಥಾಪಕರಾದ ಶ್ರೀವಿಬುಧೇಶ ತೀರ್ಥರ ಶೈಕ್ಷಣಿಕ ಸಾಧನೆಗಳನ್ನೂ ಬಿಚ್ಚಿಟ್ಟರು.
ಇಸ್ರೋದ ವಿಶ್ರಾಂತ ವಿಜ್ಞಾನಿಯಾದ ಶ್ರೀಶ ಉಡುಪರು 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕುಮಾರಿ ನಿರೀಕ್ಷ ಬಿ.ರಾವ್ ಅವಳಿಗೆ ತಮ್ಮ ತಂದೆ ಯ ಹೆಸರಿನ “ಕುಂಜೂರು ಕೇಶವ ಉಡುಪ ‘ವಿಶೇಷ ಫಲಕವನ್ನೂ ರೂ. 5,000 ನಗದು ಬಹುಮಾನವನ್ನೂ ನೀಡಿದರು.
ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ದಕ್ಷ ಜೆ. ಶೆಟ್ಟಿ, ಕಲಾ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ಕು. ರೇಖಾ ಅವರಿಗೂ ರೂ. 5000 ನಗದು ಬಹುಮಾನವನ್ನೂ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕು. ಕೃತಿ ಜಿ ಹಾಗೂ ದೀಪ್ತಿ ದೇವಾಡಿಗ ಅವರಿಗೂ ತಲಾ ರೂ. 2000 ನಗದು ಬಹುಮಾನವನ್ನು ಪೂಜ್ಯ ಸ್ವಾಮೀಜಿಯವರು ನೀಡಿದರು.
ಕಾಲೇಜು ಹಾಗು ಪ್ರೌಡ ಶಾಲೆಯ ನಾಯಕರಾಗಿ ಆಯ್ಕೆಗೊಂಡ ನಿತಿಶಾ ಶೆಟ್ಟಿ, ಶಮೃತ್, ಲಹರಿ ಮತ್ತು ವಿದ್ಯಾರ್ಥಿ ಮಂಡಳಿ ಸದಸ್ಯರಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಜೀವ ನಾಯಕ್ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರತಿಭಾ ಪುರಸ್ಕಾರದ ವಿದ್ಯಾರ್ಥಿಗಳ ಪಟ್ಟಿಯನ್ನು ಡಾ. ಜಯಶಂಕರ್ ಕೆ ವಾಚಿಸಿದರು.
ಆಡಳಿತ ಮಂಡಳಿ ಸದಸ್ಯರಾದ ಪ್ರೊ. ನಿತ್ಯಾನಂದ, ಇಸ್ರೋ ನಿವೃತ್ತ ವಿಜ್ಞಾನಿ ಶ್ರೀಶ ಉಡುಪ, ಎರ್ಮಾಳು ಬೀಡು ಅಶೋಕ್ ರಾಜ್, ಉಭಯ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ರಾವ್ ಹಾಗೂ ಮಂಜುನಾಥ ಎ ವಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕು. ಧನ್ಯ ಸ್ವಾಗತಿಸಿದರು. ವಿಶ್ವೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಮರ್ಥ ವಂದಿಸಿದರು.

