ಗೌರವ ಡಾಕ್ಟರೇಟ್ ಪುರಸ್ಕೃತರಾಗಿರುವ ಡಾ| ಕೆ. ಪ್ರಕಾಶ ಶೆಟ್ಟಿ ಅವರಿಗೆ ಪಡುಬಿದ್ರಿಯಲ್ಲಿ ಅಭಿನಂದನೆ
ನನ್ನ ಜನ್ಮಭೂಮಿಗೆ ಸದಾ ಚಿರಋಣಿಯಾಗಿರುವೆನು : ಡಾ| ಕೆ. ಪ್ರಕಾಶ ಶೆಟ್ಟಿ
ಪಡುಬಿದ್ರಿಯಲ್ಲಿ`ಪ್ರಕಾಶಾಭಿನಂದನೆ’
ಪಡುಬಿದ್ರಿ, ಜು. 7: ಜೀವನದ ಆನಂದಮಯ ಕ್ಷಣವಿದು. ಜನರ ಪ್ರೀತಿ, ಅಭಿಮಾನದಿಂದಲಷ್ಟೇ ಜೀವನದ ಸಾಧನೆಯ ಸತ್ಯಗಳ ಅರಿವಾಗಿದೆ. ದೈವ, ದೇವರ ಅನುಗ್ರಹದಿಂದ ತನ್ನೆಲ್ಲಾ ಸಾಧನೆಗಳಾಗಿವೆ. ನನ್ನ ಜನ್ಮಭೂಮಿಗೆ ಸದಾ ಚಿರಋಣಿಯಾಗಿರುವೆನು. ಗಳಿಸಿದ್ದರಲ್ಲಿ ಮಿಕ್ಕಿರುವುದನ್ನು, ಉಳಿದಿರುವುದನ್ನು ನಾನು ಸಮಾಜಕ್ಕೆ ನೀಡುತ್ತಲೇ ಬಂದಿರುವೆನು. ಮುಂದಿನ ದಿನಗಳಲ್ಲಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಜೀರ್ಣೋದ್ಧಾರದ ಕಾರ್ಯವನ್ನೂ ನಿಮ್ಮೆಲ್ಲರ ಸಹಕಾರದೊಂದಿಗೆ ವಿನೂತನ ಶೈಲಿಯಲ್ಲಿ ನಿರ್ವಹಿಸಿ ಸಾಧಿಸಲಿರುವುದಾಗಿ ಬೆಂಗಳೂರಿನ ಎಂಆರ್ಜಿ ಗ್ರೂಪ್ನ ಸಂಸ್ಥಾಪಕ, ಆಡಳಿತ ನಿರ್ದೇಶಕ ಡಾ| ಕೆ. ಪ್ರಕಾಶ ಶೆಟ್ಟಿ ಹೇಳಿದರು.
ಅವರು ಜು. ೭ರಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ಮಂಗಳೂರು ವಿವಿ ಪ್ರದಾನಿಸಿದ ಗೌರವ ಡಾಕ್ಟರೇಟ್ಗಾಗಿ ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಆಯೋಜಿಸಲ್ಪಟ್ಟ `ಪ್ರಕಾಶಾಭಿನಂದನೆ’ಯನ್ನು ಸ್ವೀಕರಿಸಿ ಮಾತನಾಡಿದರು.
ಸಭಾ ಅಧ್ಯಕ್ಷತೆ ವಹಿಸಿ ಮಾತಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಂಕಲ್ಪ ಶುದ್ಧಿಯಿಂದ ಸಂಕಲ್ಪ ಸಿದ್ಧಿಯಾಗುವುದೆನ್ನುವ ನುಡಿಯಂತೆ ಪ್ರಕಾಶ ಶೆಟ್ಟಿ ಅವರ ಮನದಾಳದ ಸಂಕಲ್ಪಗಳು ದೈವಾನುಗ್ರಹದಿಂದ ತ್ವರಿತವಾಗಿ ಸಿದ್ಧಿಸಲಿ ಎಂದರು.
ಶ್ರೀ ದೇಗುಲದ ಅರ್ಚಕ ಶ್ರೀಹರಿ ಭಟ್ ಅವರು ಕೆ. ಪ್ರಕಾಶ ಶೆಟ್ಟಿ ಅವರ ಶುಭಾಶಂಸನೆ ಗೈದರು.
ಡಾ| ರಾಘವೇಂದ್ರ ರಾವ್ ಅಭಿನಂದನಾ ಭಾಷಣಗೈದರು.
ಅಶಾ ಪ್ರಕಾಶ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ವೈ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಕಮಿಶನರ್ ಪ್ರಶಾಂತ್ ಕುಮಾರ್ ಶೆಟ್ಟಿ, ಶ್ರೀ ದೇವಸ್ಥಾನದ ಅರ್ಚಕರಾದ ಗುರುರಾಜ ಭಟ್ ವೈ., ಹೆಜಮಾಡಿ ಪದ್ಮನಾಭ ಭಟ್, ಪದ್ಮನಾಭ ಕೊರ್ನಾಯ, ಶ್ರೀ ದೇಗುಲದ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಕೋಟೆಕಾರ್, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ರವಿ ಸುಂದರ ಶೆಟ್ಟಿ ವೇದಿಕೆಯಲ್ಲಿದ್ದರು.
ಆಶಾ ಪ್ರಕಾಶ ಶೆಟ್ಟಿ ಹಾಗೂ ಡಾ. ಕೆ. ಪ್ರಕಾಶ್ ಶೆಟ್ಟಿ ದಂಪತಿಯನ್ನು ವೇದಿಕೆಯಲ್ಲಿ ಶ್ರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ವಿವಿಧ ಸಂಘ, ಸಂಸ್ಥೆಗಳು, ವೈಯಕ್ತಿಕವಾಗಿಯೂ ಸಮ್ಮಾನಿಸಿ ಗೌರವಿಸಲಾಯಿತು.
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿದೇವಸ್ಥಾನದ ಅನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ ಸ್ವಾಗತಿಸಿದರು.
ನವೀನ್ ಚಂದ್ರ ಜೆ. ಶೆಟ್ಟಿ ಪ್ರಸ್ತಾವಿಸಿದರು. ಕಸ್ತೂರಿ ರಾಮಚಂದ್ರ ಅವರು ಕೆ ಪ್ರಕಾಶ್ ಶೆಟ್ಟಿ ಅವರ ಅಭಿನಂದನಾ ಪತ್ರವನ್ನು ವಾಚಿಸಿದರು. ಡಾ| ರಾಘವೇಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ ವಂದಿಸಿದರು.

