ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನೂತನ ಅತ್ಯಾಚಾರ – ವಿರೋಧಿ ಮಸೂದೆ ಸರ್ವಾನುಮತದಿಂದ ಅಂಗೀಕಾರ
(Kolkatta) ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ ವಿಧಾನ ಸಭೆಯು ಇಂದು ನೂತನವಾಗಿ ರಚಿಸಲಾದ ಅತ್ಯಾಚಾರ ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಬಿಜೆಪಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಮಸೂದೆಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದ್ದು, ಅದನ್ನು ಸದನ ಅಂಗೀಕಾರ ಮಾಡಿಲ್ಲ.
ಕಳೆದ ತಿಂಗಳು ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಎರಡು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿತ್ತು.
ಇಂದು ಬೆಳಿಗ್ಗೆ ಮಸೂದೆ ಮಂಡಿಸಿದ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಸೂದೆಯ ಪರವಾಗಿ ಮಾತನಾಡಿದರು. ಇದು “ಮಾದರಿ ಮತ್ತು ಐತಿಹಾಸಿಕ” ಮಸೂದೆ ಎಂದು ಶ್ಲಾಘಿಸಿ, ವಿಧೇಯಕ ಕಾನೂನಾಗಿ ರೂಪುಗೊಂಡ ನಂತರ ರಾಜ್ಯ ಪೊಲೀಸರ ವಿಶೇಷ ಘಟಕ – ‘ಅಪರಾಜಿತಾ ಟಾಸ್ಕ್ ಫೋರ್ಸ್’ ಅನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

