ಹೆಜಮಾಡಿ: ‘ಮಕ್ಕಳ ಹಬ್ಬ’ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಕಲಾರತ್ನ, ಕಲಾಶ್ರೀ ಪ್ರಶಸ್ತಿ ಪ್ರದಾನ
ಪಡುಬಿದ್ರಿ ಯುವವಾಹಿನಿ ಘಟಕದಿಂದ ಹೆಜಮಾಡಿಯಲ್ಲಿ ಮಕ್ಕಳ ಹಬ್ಬ
(Hejamady) ಹೆಜಮಾಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ ಸಂಸ್ಥೆಯ ಪಡುಬಿದ್ರಿ ಘಟಕದ ವತಿಯಿಂದ ಹೆಜಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಮಕ್ಕಳ ಹಬ್ಬದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆಗೈದ ನಾಲ್ಕನೇ ತರಗತಿಯ ನಿಶಿಕಾರವರಿಗೆ ಕಲಾಶ್ರೀ ಹಾಗೂ 7ನೇ ತರಗತಿಯ ದಿಯಾ ಪೂಜಾರಿಯವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅವರು ಮಾತನಾಡಿ, ಸರಕಾರಿ ಶಾಲೆಗೆ ಮಹತ್ವ ನೀಡಿ ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸಿ ಯುವ ವಾಹಿನಿ ಅಭಿನಂದನಾರ್ಹ. ಯುವವಾಹಿನಿ ನೀಡಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕಲಿತ ಶಾಲೆಗೂ, ಊರಿಗೂ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹರೀಶ್ ಕೆ ಪೂಜಾರಿ ಹೇಳಿದರು.
ಪಡುಬಿದ್ರಿ ಘಟಕದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಯಶೋದರ್ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಹೆಜಮಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶಿವರಾಮ್ ಎನ್ ಶೆಟ್ಟಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಭಾರತಿ ಭಾಸ್ಕರ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶ್ರೀಮತಿ ಚೈತ್ರಾ ಮನೊಹರ್ ಉಪಸ್ಥಿತರಿದ್ದರು.
ಕುಮಾರಿ ತೃಪ್ತಿ ಹಾಗೂ ಹರೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಮತಿ ಸುಜಾತಾ ಪ್ರಸಾದ್ ವಂದಿಸಿದರು.

