ವಕ್ಫ್ ತಿದ್ದುಪಡಿ ಕಾಯ್ದೆಯಿಂದ ಮುಸಲ್ಮಾನ ಸಮುದಾಯದ ಎಲ್ಲ ಪಂಗಡಗಳಿಗೂ ಒಳ್ಳೆಯದಾಗಲಿದೆ – ಉಡುಪಿಯಲ್ಲಿ ಅಣ್ಣಾಮಲೈ
(Udupi) ಉಡುಪಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ಮುಸ್ಲಿಂ ಸಹೋದರಿಯರು, ತಾಯಂದಿರು ಸ್ವಾಗತ ಮಾಡಿದ್ದಾರೆ. ಇದೊಂದು ಅತ್ಯುತ್ತಮ ತಿದ್ದುಪಡಿ ಕಾಯ್ದೆಯಾಗಿ̧ದ್ದು ಯಾರೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಅದು ಡಿಸ್ಮಿಸ್ ಆಗಲಿದೆ ಎಂದು ಬಿಜೆಪಿ ಮುಖಂಡ ಅಣ್ಣಾಮಲೈ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ವಕ್ಫ್ ಕಾಯ್ದೆ ಹಲವು ಬಾರಿ ತಿದ್ದುಪಡಿಗೊಂಡಿದೆ. ಕಾಲಕಾಲಕ್ಕೆ ತಿದ್ದುಪಡಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಹಜ. ಈಗ ಕೇಂದ್ರ ಅತಿದೊಡ್ಡ ತಿದ್ದುಪಡಿ ತಂದಿದೆ. 39 ಲಕ್ಷ ಎಕರೆ ಜಾಗ ವಕ್ಫ್ ಕೈಯಲ್ಲಿದೆ. ಅದನ್ನು ರೆಗ್ಯುಲೇಟ್ ಮಾಡಲು ತಿದ್ದುಪಡಿ ಬೇಕೇಬೇಕು. ಇದು ಮುಸ್ಲಿಂ ಸಮುದಾಯದ ಎಲ್ಲ ಪಂಗಡಗಳಿಗೂ ಒಳ್ಳೆಯದು ಮಾಡಲಿದೆ. ಬಡವರಿಗೂ ಒಳ್ಳೆಯದು ಮಾಡಲಿದೆ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು.
ಜನರ ಪ್ರೀತಿಯನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ– ಬಿಜೆಪಿ ಮುಖಂಡ ಅಣ್ಣಾಮಲೈ
ಜನರ ಪ್ರೀತಿಯನ್ನು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದುಕೊಂಡಿದೆ ಎಂದು ಬಿಜೆಪಿ ಮುಖಂಡ ಅಣ್ಣಾಮಲೈ ಹೇಳಿದ್ದಾರೆ. ನಾನು ಕರ್ನಾಟಕ ಸರ್ಕಾರವನ್ನು ಹೊರಗಿನಿಂದ ಇದ್ದು ನೋಡುತ್ತಿದ್ದೇನೆ. ಸರ್ಕಾರದಲ್ಲಿರುವ ಒಬ್ಬ ದೊಡ್ಡ ಮನುಷ್ಯ, ಒಬ್ಬ ಪವರ್ ಫುಲ್ ವ್ಯಕ್ತಿ ಸಿಡಿ ಹನಿಟ್ರ್ಯಾಪ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಕರ್ನಾಟಕದ ಜನರ ಸಂಸ್ಕೃತಿ, ಶ್ರೀಮಂತವಾಗಿದೆ. ಆದರೆ ಸರ್ಕಾರ ಜನ ವಿರೋಧಿಯಾಗಿದೆ. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ. ಇಡೀ ದೇಶ ಇದನ್ನು ನೋಡ್ತಾ ಇದೆ ಎಂದು ಹೇಳಿದ್ದಾರೆ.
ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಎಲ್ಲರೂ ಜೊತೆಯಾಗಬೇಕು ಎಂದು ಮನವಿ ಮಾಡಿದ ಅವರು, ಸದ್ಯಕ್ಕೆ ಕರ್ನಾಟಕದಲ್ಲಿ ಚುನಾವಣೆ ಇಲ್ಲ. ಆದರೆ ಜನರ ಪ್ರೀತಿಯನ್ನು ಈ ಸರ್ಕಾರ ಕಳೆದುಕೊಂಡಿದೆ.ಜನರು ಪ್ರೀತಿ ಕೊಟ್ಟು ಬಿಜೆಪಿ ಜೊತೆ ಯಾತ್ರೆಯಲ್ಲಿ ಭಾಗವಹಿಸಬೇಕು.
ರಾಜ್ಯದಿಂದ ಕಾಂಗ್ರೆಸ್ ಕಿತ್ತೊಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.
