ಉಡುಪಿ ಧರ್ಮಪ್ರಾಂತ್ಯದ ಚರ್ಚುಗಳಲ್ಲಿ ಭಾರತೀಯ ಸೇನೆಗೆ ಹಾಗೂ ಯೋಧರಿಗೆ ವಿಶೇಷ ಪ್ರಾರ್ಥನೆ
(Udupi) ಉಡುಪಿ: ಭಾರತೀಯ ಕಥೊಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಸೂಚನೆಯ ಮೇರೆಗೆ ಉಡುಪಿ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲಿ ಭಾನುವಾರ ಭಾರತೀಯ ಸೇನೆಗೆ ಹಾಗೂ ಯೋಧರಿಗೆ ಒಳಿತಾಗುವಂತೆ ಆಶಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಎಲ್ಲಾ ಚರ್ಚುಗಳಲ್ಲಿ ಭಾನುವಾರದ ಬಲಿಪೂಜೆಯ ವೇಳೆ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರಿಗೆ ಒಳಿತಾಗುವಂತೆ ಕೋರಿ ವಿಶೇಷ ಪರಮ ಪ್ರಸಾದದ ಆರಾಧನೆಯ ಮೂಲಕ ಧರ್ಮಗುರುಗಳು ಪ್ರಾರ್ಥನೆಯನ್ನು ಸಲ್ಲಿಸಿದರು.
ತಮ್ಮ ಅಧಿಕೃತ ವಾರ್ಷಿಕ ಭೇಟಿಯಲ್ಲಿರುವ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀತಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕಾರ್ಕಳ ತಾಲೂಕಿನ ಬೆಳ್ಮಣ್ ಸಂತ ಜೋಸೆಫರ ಚರ್ಚಿನಲ್ಲಿ ವಿಶೇಷ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ದೇಶ ಕಾಯುವ ಸೈನಿಕರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಇದೇ ವೇಳೆ ಕ್ರೈಸ್ತ ಧರ್ಮಸಭೆಗೆ ನೂತನ ಜಗದ್ಗುರುವಾಗಿ ಆಯ್ಕೆಯಾಗಿರುವ ಪೋಪ್ 14 ನೇ ಲಿಯೋ ಅವರಿಗೆ ಶುಭಕೋರಿ ವಿಶೇಷ ಆರಾಧನೆ ಸಲ್ಲಿಸಿದರು.
