ಉಡುಪಿ: 34 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಟ್ಕಾ ಕಿಂಗ್ ಪಿನ್ ಸಹಿತ ಇಬ್ಬರ ಬಂಧನ
(Shirva) ಶಿರ್ವ: ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಶನಿವಾರ ಕುರ್ಕಾಲು ಗ್ರಾಮದ ಶಂಕರಪುರದ ಅಶ್ವತಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಬಂಧಿತ ಆರೋಪಿಯನ್ನು ವಿಠಲ ಎಂದು ಗುರುತಿಸಲಾಗಿದೆ.
ಮಟ್ಕಾ ಚೀಟಿ ನೀಡುವ ಬಗ್ಗೆ ವಿಠಲ ದೇವಾಡಿಗ ಬಳಿ ವಿಚಾರಿಸಿದಾಗ ಜೂಜಾಟದ ಬುಕ್ಕಿ ಉಡುಪಿಯ ಲಿಯೋ ಎಂಬವರು ಸೂಚಿಸಿದಂತೆ ನಾನು ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡಿ ಅವರಿಂದ ಹಣ ಸಂಗ್ರಹ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಪೊಲೀಸರು ಬಂಧಿತನಿಂದ ಮಟ್ಕಾ ಸಂಖ್ಯೆ ಬರೆದಿರುವ ಒಂದು ಚೀಟಿ, 1,200 ನಗದು ಹಣ, 1 ಬಾಲ್ ಪೆನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೊದಲ ಆರೋಪಿ ವಿಠಲ ದೇವಾಡಿಗ ವಿರುದ್ಧ ಈಗಾಗಲೇ 12 ಪ್ರಕರಣಗಳು ದಾಖಲಾಗಿರುತ್ತದೆ. ಎರಡನೇ ಆರೋಪಿಯಾದ ಲಿಯೋ ಕರ್ನೇಲಿಯೋ ವಿರುದ್ಧ ಈಗಾಗಲೇ ಸುಮಾರು 34 ಪ್ರಕರಣಗಳು ದಾಖಲಾಗಿರುತ್ತದೆ. ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

