ಕೇರಳ : ಹಡಗಿನಲ್ಲಿ ಅಗ್ನಿ ದುರಂತ: ಚಿಕಿತ್ಸೆಗಾಗಿ 18 ಸಿಬಂದಿ ಮಂಗಳೂರಿಗೆ
(Mangaluru) ಮಂಗಳೂರು, ಜೂ. 10: ಕೇರಳದ ಕೋಯಿಕ್ಕೋಡ್ ಬೇಪೂರ್ ಸಮೀಪ ಸಮುದ್ರದಲ್ಲಿ ಹಡಗಿನಲ್ಲಿ ಅಗ್ನಿದುರಂತ ಸಂಭವಿಸಿದ್ದು, 18 ಮಂದಿ ಸಿಬ್ಬಂದಿಗಳನ್ನು ಸೋಮವಾರ ತಡ ರಾತ್ರಿ ಮಂಗಳೂರಿನ ಎಜೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಹಡಗಿನಲ್ಲಿದ್ದ ನಾಲ್ವರು ನಾಪತ್ತೆಯಾಗಿದ್ದಾರೆ.
ಸಿಂಗಾಪುರದ ಕಂಟೈನರ್ ಹಡಗು ಎಂ.ವಿ. ವಾನ್ ಹೈಯಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು ಭಾರೀ ಅಗ್ನಿ ಅನಾಹುತ ಉಂಟಾಯಿತು. ಘಟನೆ ವೇಳೆ ನಾಲ್ವರು ಸಿಬಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಇಬ್ಬರು ತೈವಾನ್ ಹಾಗೂ ತಲಾ ಒಬ್ಬರು ಮ್ಯಾನ್ಮಾರ್ ಮತ್ತು ಇಂಡೋನೇಶ್ಯಾ ರಾಷ್ಟ್ರದ ಪ್ರಜೆಗಳಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯ ಐಎನ್ಎಸ್ ಸೂರತ್ ಹಾಗೂ ಕೋಸ್ಟ್ಗಾರ್ಡ್ನ ಮೂರು ನೌಕೆಗಳು ಪಾಲ್ಗೊಂಡಿವೆ.
ಕೊಲೊಂಬೋದಿಂದಮುಂಬಯಿಯ ನ್ಯಾವಾ ಶೇವಾ ಕಂಟೈನರ್ ಟರ್ಮಿನಲ್ಗೆ ಈ ಹಡಗು ಪ್ರಯಾಣಿಸುತ್ತಿತ್ತು. ಜೂನ್ 7ರಂದು ಕೊಲೊಂಬೊದಿಂದ ಹೊರಟ ಹಡಗು ಜೂನ್ 10ಕ್ಕೆ ಮುಂಬಯಿ ತಲುಪಬೇಕಿತ್ತು.
ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಬೇಪೂರ್ನಿಂದ 70 ನಾಟಿಕಲ್ ಮೈಲು ದೂರದಲ್ಲಿ ಹಡಗು ಸಾಗುವ ವೇಳೆ ಸ್ಫೋಟ ಉಂಟಾಗಿತ್ತು.
ಕಾರ್ಯಾಚರಣೆಯಲ್ಲಿ ಮಂಗಳೂರಿನ ಕೋಸ್ಟ್ಗಾರ್ಡ್ ಹಡಗು ಐಸಿಜಿಎಸ್ ರಾಜ್ ದೂತ್ ಸೇರಿದಂತೆ ಹಲವು ನೌಕೆಗಳು ಪಾಲ್ಗೊಂಡಿವೆ.

