ಬಹರೈನ್ : ಬಹರೈನ್ ಕನ್ನಡ ಸಂಘದ ಆಯೋಜನೆಯಲ್ಲಿ ಸತ್ಯನಾರಾಯಣ, ಶನಿ ಪೂಜಾ ಮಹೋತ್ಸವ
(Bahrain) ಬಹರೈನ್: ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಇತ್ತೀಚೆಗೆ ಮನಾಮದಲ್ಲಿರುವ ಕನ್ನಡ ಭವನದ ಸಭಾಂಗಣದಲ್ಲಿ ಸತ್ಯನಾರಾಯಣ ಮತ್ತುಶನಿ ಪೂಜಾ ಪೂಜಾ ಮಹೋತ್ಸವವನ್ನು ಆಯೋಜಿಸಿದ್ದು, ಸುಮಾರು 200ಕ್ಕೂ ಹೆಚ್ಚು ಭಕ್ತರು ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಅಜಿತ್ ಬಂಗೇರ ಅವರ ಸಾರಥ್ಯ ದಲ್ಲಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಿಟ್ಟನಲ್ಲಿ ಸಂಸ್ಥೆಯ ಪ್ರಥಮ ಕಾರ್ಯಕ್ರಮವಾಗಿ ಪೂಜಾ ಮಹೋತ್ಸವವನ್ನು ಆಯೋಜಿಸಿಲಾಗಿತ್ತು.
ಈ ಪೂಜಾ ಕೈಂಕರ್ಯವನ್ನು ನಡೆಸಿಕೊಡಲು ಬಹರೈನ್‌ಗೆ ವಿಶೇಷವಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಕದ್ರಿ ದೇಗುಲದ ಅರ್ಚಕರಾದ ವೇದಮೂರ್ತಿ ಶ್ರೀಕೃಷ್ಣ ಅಡಿಗರು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಶನಿ ಪೂಜೆಗಳ ವಿಧಿ ವಿಧಾನಗಳನ್ನು ಸಾಂಗವಾಗಿ ನೆರವೇರಿಸಿಕೊಟ್ಟರು.
ಸ್ಥಳೀಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದು ವಾದ್ಯ-ವೃಂದದೊಂದಿಗೆ ಸುಶ್ರಾವ್ಯ ವಾದ ಭಜನೆಗಳು ನೆರೆದ ಭಕ್ತರನ್ನು ಭಕ್ತಿ ಪರವಶರಾಗುವಂತೆ ಮಾಡಿತು.
ಭಾರತದಿಂದ ಹೂವುಗಳನ್ನು ತರಿಸಿ ದೇವರ ಮಂಟಪವನ್ನು ಸುಂದರವಾಗಿ ಮತ್ತು ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಕನ್ನಡ ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಆಹ್ವಾನಿತ ಅತಿಥಿಗಳನ್ನು ಸ್ವಾಗತಿಸಿದರು.
ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಂಕಲ್ಪದೊಂದಿಗೆ ಪೂಜೆ ಪ್ರಾರಂಭಗೊಂಡಿತು.
ಗಣಪತಿ ಪೂಜೆ ಕಳಸ ಪೂಜೆ, ನವಗ್ರಹ ಪೂಜೆ, ಸತ್ಯನಾರಾಯಣ ಪೂಜೆ, ಭಜನಾ ಸಂಕೀರ್ತನೆ, ಸತ್ಯನಾರಾಯಣ ದೇವರ ಕಥೆ, ಶನಿ ಪೂಜೆಯ ಬಳಿಕ ಮಹಾಮಂಗಳಾರತಿ ನಡೆಯಿತು.
ಬಹರೈನ್ ಕನ್ನಡ ಸಂಘದ ನೂತನ ಅಧ್ಯಕ್ಷ ಅಜಿತ್ ಬಂಗೇರರವರು ನೆರೆದ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಈ ಪೂಜಾ ಮಹೋತ್ಸವ ಪುಣ್ಯದ ಕಾರ್ಯಕ್ರಮ ಮಾತ್ರವಲ್ಲ ನಮ್ಮೆಲ್ಲರನ್ನೂ ಒಂದುಗೂಡಿಸಲು ಅವಕಾಶ ಕಲ್ಪಿಸುವ ಮಾಧ್ಯಮವಾಗಿದೆ. ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅತ್ಯಗತ್ಯ ಎಂದು, ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.
ವೈದಿಕರಾದ ವೇ.ಮೂ. ಕೃಷ್ಣ ಅಡಿಗರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಸರ್ವ ಧರ್ಮ ಸಮನ್ವಯ ಎಂಬಂತೆ ಕ್ರೈಸ್ತ ಧರ್ಮಗುರುಗಳಾದ ರೆವೆರೆಂಡ್ ಸರ್ ರೋಬಿನ್ಸನ್ ಹಾಗೂ ಮುಸ್ಲಿಂ ಧರ್ಮಗುರುಗಳಾದ ಅಬ್ದುಲ್ ಮಜೀದ್ ಜುಪ್ರಿ ಅವರು ವಿಶೇ ಷವಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿ ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಅನ್ನದಾನದ ಪ್ರಾಯೋಜಕರಾಗಿ ಜಯಶಂಕರ್ ಸಹಕರಿಸಿದ್ದರು.
ಕನ್ನಡ ಸಂಘ ಆಯೋಜಿಸಿದ್ದ ಈ ಪೂಜಾ ಮಹೋತ್ಸವದಲ್ಲಿ ದ್ವೀಪದ ಎಲ್ಲ ಸಮುದಾಯ ಮತ್ತು ಸಂಘಟನೆಗಳ ಅಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು.
ಮಹಾ ಮಂಗಳಾರತಿಯ ಬಳಿಕ ಮಹಾ ಪ್ರಸಾದದ ಅಂಗವಾಗಿ ಅನ್ನ ಸಂತರ್ಪಣೆ ನೆರವೇರಿತು.
ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಸ್ವಾಗತಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಸ್ವಯಂ ಸೇವಕರು, ಸೇವಾದಾರರು ಹಾಗೂ ಪ್ರಾಯೋಜಕರಿಗೆ ಧನ್ಯವಾದ ಸಲ್ಲಿಸಿದರು.

