ರಾಜಕಿಯ ನನಗೆ ಗಂಜಿ ಕೇಂದ್ರ ಅಲ್ಲ: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಕಾಪುವಿನಲ್ಲಿ ಶಾಸಕರ ಪತ್ರಿಕಾಗೋಷ್ಠಿ
(Kaup) ಕಾಪು : ಶಾಸಕನಾಗಿ ಎರಡು ವರ್ಷಗಳಲ್ಲಿ ಕಾಪು ಕ್ಷೇತ್ರದ ಅಭಿವೃದ್ದಿಗೆ ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಸೀಮಿತ ಅನುದಾನದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ವಿನಾ ಕಾರಣ ನನ್ನ ಮೇಲೆ ಅಪಾದನೆ ಮಾಡುತ್ತಿರುವ ಮಾಜಿ ಸಚಿವ ವಿನಯಕುಮಾರ್ ಅವರು ಆರೋಪವನ್ನು ಸಾಬೀತು ಮಾಡಲಿ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸವಾಲು ಎಸೆದರು.
ಕಾಪುವಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, ಮಾಜಿ ಸಚಿವರಾಗಿ ಕ್ಷೇತ್ರದ ಶಾಸಕರಾಗಿದ್ದು, ರಾಜ್ಯದಲ್ಲಿ ತಮ್ಮದೇ ಸರಕಾರ ಆಡಳಿತದಲ್ಲಿದ್ದರೂ ಕೂಡ ಆಡಳಿತ ವೈಫಲ್ಯ ಎಂದು ಮನಗಂಡಿದ್ದರೂ, ಜನಸಾಮಾನ್ಯರಿಗೆ ತಪ್ಪು ಸಂದೇಶವನ್ನು ನೀಡುವ ಹುನ್ನಾರದಿಂದ ಗ್ರಾಮ ಪಂಚಾಯತ್‌ಗಳಲ್ಲಿ ಹಾಗೂ ಸರಕಾರಿ ಕಚೇರಿಗಳ ಮುಂದೆ ತಮ್ಮ ಹಿಂಬಾಲಕರ ಮೂಲಕ ಪ್ರತಿಭಟನೆಯ ನಾಟಕವನ್ನಾಡುತ್ತಾ ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿದ್ದಾರೆ.
ನನಗೆ ರಾಜಕಿಯ ಗಂಜಿ ಕೇಂದ್ರ ಅಲ್ಲ. ಶುದ್ಧ ಹಸ್ತನಾಗಿದ್ದೇನೆ. ನನ್ನ ಮಗನ ಹಾಗೂ ಸಂಬಂಧಿಕರ ಮೇಲೆ ಆರೋಪ ಮಾಡುತ್ತಾರೆ. ಸಂಶಯ ಇದ್ದಲ್ಲಿ ಆರ್‌ಟಿಐ ಮೂಲಕ ದಾಖಲೆ ಪಡೆದು ಸಾಬೀತು ಪಡಿಸಲಿ ಎಂದು ಸವಾಲು ಎಸೆದರು.
ಐದು ಲಕ್ಷ ರೂ. ಮೇಲೆ ಟೆಂಡರ್ ಆಗುತ್ತದೆ. ಅದರ ಮೇಲೆ ಹಸ್ತಕ್ಷೇಪ ಮಾಡಿಲ್ಲ. ವರ್ಗಾವಣೆ ದಂಧೆ, ಕಾಂಟ್ರಾಕ್ಟರ್ ದಂಧೆಯಲ್ಲಾಗಲಿ ಯಾವುದೆ ದಂಧೆಯಲ್ಲೂ ನಾವಿಲ್ಲ. ಅದರ ಅಗತ್ಯವೂ ನನಗಿಲ್ಲ. ಜನರಿಗೆ ಸತ್ಯವಿಚಾರ ತಿಳಿಸಲು ನನ್ನ ಸತ್ಯದರ್ಶನವನ್ನು ನಾನು ಮಾಡುತಿದ್ದೇನೆ.
ಕ್ಷೇತ್ರದ ಸಮಸ್ಯೆಗಳ ಕುರಿತಂತೆ ರಾಜ್ಯ ಸರ್ಕಾರದ ಎಲ್ಲಾ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದೇನೆಯೇ ಹೊರತು, ವೈಯಕ್ತಿಕ ಕೆಲಸಗಳಿಗೆ ಬೇಡಿಕೆ ಮುಂದಿಟ್ಟಿಲ್ಲ.
ಸರ್ಕಾರ ದಿವಾಳಿಯಾಗಿದೆ.
ಈವರೆಗೂ ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರಾಗಿಲ್ಲ. ಕ್ಷೇತ್ರದಲ್ಲಿ ವಸತಿ ಯೋಜನೆಗಾಗಿ 742 ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಿದ್ದರೂ, ಒಂದೂ ಮಂಜೂರಾಗಿಲ್ಲ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಸತ್ಯಾಂಶ ಗೊತ್ತಿದ್ದರೂ ಆಪಾದನೆ ಮಾಡಿ ಜನರ ಹಾದಿ ತಪ್ಪಿಸುವ ಕೆಲಸ ಮಾಜಿ ಸಚಿವರಿಂದಾಗುತ್ತಿದೆ. ಉಡುಪಿ ತಾಲೂಕು ಕಚೇರಿಗೆ ತೆರಳಿ ಖುದ್ದು ಕುಳಿತು ಅರ್ಜಿ ವಿಲೇ ಮಾಡುವುದಲ್ಲದೆ, ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿ ಶಾಸಕರ ಹಕ್ಕುಚ್ಯುತಿ ಮಾಡುತ್ತಿದ್ದಾರೆ ಎಂದೂ ಗುರ್ಮೆ ಹೇಳಿದ್ದಾರೆ.
ಕಾಪು ಕ್ಷೇತ್ರದಲ್ಲಿ 32,000 ಫಲಾನುಭವಿಗಳ ಪಿಂಚಣಿಯನ್ನು ತಡೆ ಹಿಡಿಯುವ ಕೆಲಸ ರಾಜ್ಯ ಸರ್ಕಾರದಿಂದಾಗಿದೆ. ಕೇವಲ ಅನಾರೋಗ್ಯಕ್ಕೆ ತುತ್ತಾದವರಿಗಷ್ಟೇ ಬಿಪಿಎಲ್ ಕಾರ್ಡ್ ನೀಡುವ ಕೆಲಸವಾಗುತ್ತಿದೆ. ಇದರಿಂದ ಬಡವರು ತೊಂದರೆಗೀಡಾಗುತ್ತಿದ್ದಾರೆ. ಕಾಪು ನಗರ ಯೋಜನಾ ಪ್ರಾಧಿಕಾರವೆಂಬ ಅವೈಜ್ಞಾನಿಕ ವ್ಯವಸ್ಥೆಯನ್ನು ತಂದು ಜನರನ್ನು ಸಂಕಷ್ಟಕ್ಕೆ ದೂಡಿರುವ ಸೊರಕೆಯವರು, ಅಧಿಕಾರಿ ಹಾಗೂ ಸಿಬ್ಬಂದಿಗಳಿಲ್ಲದೆ ಅಲ್ಲಿ ಜನ ಸಾಮಾನ್ಯರಿಗಾಗುತ್ತಿರುವ ಸಮಸ್ಯೆಯನ್ನು ತಿಳಿದುಕೊಳ್ಳಲಿ. ಸೊರಕೆಯವರು ಸಚಿವರಾಗಿದ್ದ ಕಾಲದಿಂದಲೂ ನಿವೇಶನ ರಹಿತರ ಸಮಸ್ಯೆ ಪರಿಹರಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಅನುದಾನದಲ್ಲಿ ಹೆಜಮಾಡಿಯಲ್ಲಿ ಕ್ರೀಡಾಂಗಣ ಅಭಿವೃದ್ದಿ ಹಾಗೂ ಮೂಲ ಸೌಕರ್ಯವನ್ನು ಒದಗಿಸಲು ಪ್ರಸ್ತಾವನೆ ಸಲ್ಲಿಸುತ್ತಿದ್ದು, ಅದು ಪ್ರಗತಿ ಹಂತದಲ್ಲಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕಾಪು ಲೈಟ್ ಹೌಸ್ ಇಲ್ಲಿ ಗ್ಲಾಸ್ ಬ್ರಿಡ್ಜ್ ಕಾಮಗಾರಿ ಹಾಗೂ ಕಾಮಿನಿ ಹೊಳೆಗೆ ಮೂಲ ಸೌಕರ್ಯ, ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಮೂಲ ಸೌಕರ್ಯವನ್ನು ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಸಂಸದರ ಶಿಪಾರಸ್ಸಿನಂತೆ ಕಟಪಾಡಿಯಲ್ಲಿ ಬಹುಬೇಡಿಕೆಯ ಅಂಡರ್ ಪಾಸ್ ಕಾಮಗಾರಿಗೆ ಟೆಂಡರ್ ಆಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಉದ್ಯಾವರದಿಂದ ಹೆಜಮಾಡಿವರೆಗಿನ ಸರ್ವಿಸ್ ರಸ್ತೆಯ ಹಾಗೂ ಕೇಂದ್ರ ಸರ್ಕಾರದಿಂದ ಕ್ಷೇತ್ರದ ಅಭಿವೃದ್ದಿಗೆ ಸಂಸದರ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿದೆ ಎಂದೂ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಕಾಪು ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯೀ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಪಕ್ಷದ ಪ್ರಮುಖರಾದ ಗೀತಾಂಜಲಿ ಸುವರ್ಣ, ಗೋಪಾಲಕೃಷ್ಣ ರಾವ್, ಶರಣ್‌ಕುಮಾರ್ ಮಟ್ಟು, ಸೋನು ಪಾಂಗಾಳ, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದ್ದರು.
