ಉಡುಪಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಸಾಗಾಟ, ಮಾರಾಟ ಪ್ರಕರಣ ಪತ್ತೆ
ಇಬ್ಬರ ಬಂಧನ, 72 ಲಕ್ಷ ಮೊತ್ತದ ಗಾಂಜಾ ಮತ್ತಿತರ ಸೊತ್ತು ವಶ
(Udupi) ಉಡುಪಿ: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಪಾರ ಮೌಲ್ಯದ ಗಾಂಜಾವನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಉಡುಪಿಯ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿಯನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಲಾರಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ.
ಮೈಸೂರಿನ ಗಣೇಶ (38 ) ಮತ್ತು ಆಂಧ್ರ ಪ್ರದೇಶ ಮೂಲದ ಗೋಪಾಲ ರೆಡ್ಡಿ( 43) ಬಂಧಿತರು.
ಆರೋಪಿಗಳಿಂದ 65 ಕಿಲೋ ಗಾಂಜಾ , ನಗದು ರೂ. 1520, ಮೊಬೈಲ್ ಗಳು ಮತ್ತು ಸಾಗಾಟ ಮಾಡಿದ ಟ್ರಕ್ ಇವುಗಳ ಒಟ್ಟು ಮೌಲ್ಯ ಸುಮಾರು 72,21,520 ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 101/2025 ಕಲಂ: 8(c), 20 (b) (ii), (C) NDPS Act 1985 ರಂತೆ ಪ್ರಕರಣ ದಾಖಲಾಗಿದೆ.

