ಕೋಟಿ ಲಲಿತಾ ಸಹಸ್ರನಾಮ ಪಾರಾಯಣ ಮಹಾಯಜ್ಞದ ಸಂಕಲ್ಪಕ್ಕೆ ಚಾಲನೆ
ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ: ಸಂದೀಪ್ ಮಂಜ
(Udupi) ಉಡುಪಿ : ಧಾರ್ಮಿಕ ಕೈಂಕರ್ಯಗಳಿಂದ ಮಾತ್ರ ಮಾನಸಿಕ ನೆಮ್ಮದಿ ದೊರಕಲು ಸಾಧ್ಯ. ಜೀವನದಲ್ಲಿ ಸ್ವಚ್ಛಂದವಾಗಿ ಬದುಕಲು ದೇವರ ಮೊರೆ ಹೋಗುವುದಲ್ಲದೆ, ಸಂಪೂರ್ಣವಾಗಿ ಶರಣಾಗತರಾಗಬೇಕು. ಇದೆಲ್ಲವೂ ಸಾಧ್ಯವಾಗಬೇಲಾದದರೆ ನಿತ್ಯವೂ ಜಪ, ದೇವರ ಸ್ತೋತ್ರ ಪಠನೆ ಮಾಡಬೇಕು ಎಂದು ಜಿಲ್ಲಾ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸಂದೀಪ್ ಮಂಜ ತಿಳಿಸಿದರು.
ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನೆರವೇರುತ್ತಿರುವ ಶರನ್ನವರಾತ್ರಿ ಮಹೋತ್ಸವದ ಲಲಿತಾ ಪಂಚಮಿ ಪರ್ವಕಾಲ ಶ್ರೀ ಕ್ಷೇತ್ರಕ್ಕೆ ಶ್ರೀಚಕ್ರವನ್ನು ಕಾಣಿಕೆಯಾಗಿ ನೀಡಿದ ದಿವ್ಯಕ್ಷೇತ್ರ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಲಕ್ಷ್ಮೀ ನರಸಿಂಹ ಸಂಸ್ಥಾನದ ಶ್ರೀ ಶಂಕರಾಚಾರ್ಯ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯವರು ಪೀಠಾರೋಹಣಗೈದ ರಜತ ಮಹೋತ್ಸವ ಸಂಭ್ರಮದ ಪ್ರಯುಕ್ತ ನಿರಂತರ ಆರು ತಿಂಗಳ ಕಾಲ ಲಲಿತಾ ಸಹಸ್ರನಾಮ ಪಾರಾಯಣವನ್ನು ಸಾಮೂಹಿಕ ವಾಗಿ ಸಂಯೋಜಿಸಿ ಶ್ರೀಕ್ಷೇತ್ರ ಹರಿಹರಪುರಕ್ಕೆ ಕಾಣಿಕೆಯಾಗಿ ಸಮರ್ಪಿಸುವ ಮಹಾ ಸಂಕಲ್ಪವನ್ನು ಸ್ವಾಮೀಜಿಯವರ ಆಶಯದಂತೆ ಶ್ರೀ ರಮಾನಂದ ಗುರೂಜಿ ನೆರವೇರಿಸಲು ಸಂಕಲ್ಪಿಸಿದ್ದಾರೆ. ಅದರ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇಮೂ ರಾಘವೇಂದ್ರ ಭಟ್ ಮಾತನಾಡಿ, ಹಿಂದೆ ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ನಡೆಸಿ ವಿವಿಧ ಧಾರ್ಮಿಕ ಪ್ರಕ್ರಿಯೆಗಳ ಮೂಲಕ ಸನಾತನ ಧರ್ಮಕ್ಕೆ ವಿಶೇಷವಾದ ಕೊಡುಗೆ ನೀಡಿ ಅಡಿಪಾಯ ಹಾಕಿ ಕೊಟ್ಟಿದ್ದಾರೆ. ಅನಂತರ ರಾಜಾಶ್ರಯದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಡೆಯುತ್ತಿತ್ತು. ಪ್ರಸ್ತುತ ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಮಠ, ಮಂದಿರ, ದೇವಸ್ಥಾನಗಳ ಮೇಲಿದೆ. ಹೋಮ, ಹವನಗಳು ಸಮರ್ಪಕವಾಗಿ ನಡೆದರೆ ಉತ್ತಮ ಮಳೆ, ಮಳೆಯಿಂದ ಸಮೃದ್ಧ ಬೆಳೆ, ತನ್ಮೂಲಕ ಸುಂದರ ಬದುಕಿಗೆ ಪೂರಕವಾಗುವುದು ಎಂದರು.
ವೇಮೂ ವಿಖ್ಯಾತ್ ಭಟ್ ಮಾತನಾಡಿ, ಯಾವುದೇ ಕಾರ್ಯ ಮಾಡುವ ಮುನ್ನ ಸಂಕಲ್ಪ ಶುದ್ಧವಾಗಿರಬೇಕು. ಸಂಕಲ್ಪ ದೃಢವಾಗಿದ್ದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯಬಹುದು ಎಂದರು.
ಸಾಮಾಜಿಕ ಕಾರ್ಯಕರ್ತೆ ಸುಪ್ರಭಾ ಆಚಾರ್ಯ, ವೇ. ಮೂ. ವಾಮನ ಭಟ್, ಪುರೋಹಿತ ಗಣೇಶ್ ಸರಳಾಯ, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಕುಂಭಾಶಿ ಕರ್ಣಾಟಕ ಬ್ಯಾಂಕಿನ ಶಾಖಾ ಪ್ರಬಂಧಕ ಪ್ರತೀಕ್ ಟಿ.ಆರ್. ಉಪಸ್ಥಿತರಿದ್ದರು.
ಲಲಿತಾ ಸಹಸ್ರನಾಮ ಪುಸ್ತಕವನ್ನು ಚಂದ್ರಕಲಾ ಶರ್ಮ ಅವರಿಗೆ ಸಾಂಕೇತಿಕವಾಗಿ ನೀಡಲಾಯಿತು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಸ್ವಾಗತಿಸಿದರು. ಉಪ್ಪೂರು ಭಾಗ್ಯಲಕ್ಷ್ಮೀ ನಿರೂಪಿಸಿ, ವಂದಿಸಿದರು.

