• Home  
  • ನ. 15 : ಕಾಪು ತಾ. 7ನೇ ಕನ್ನಡ ಸಾಹಿತ್ಯ ಸಮ್ಮೇಳನ (Nov. 15: Kaup Ta. 7th Kannada Literary Conference)
- ಪುಸ್ತಕ ಬಿಡುಗಡೆ - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ನ. 15 : ಕಾಪು ತಾ. 7ನೇ ಕನ್ನಡ ಸಾಹಿತ್ಯ ಸಮ್ಮೇಳನ (Nov. 15: Kaup Ta. 7th Kannada Literary Conference)

Share: ನ. 15 : ಕಾಪು ತಾ. 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಫಕೀರ್ ಮುಹಮ್ಮದ್ ಕಟ್ಪಾಡಿ (Kaup) ಕಾಪು : ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವು ನ. 15ರಂದು, ಶನಿವಾರ, ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಕನ್ನಡದ ಖ್ಯಾತ ಕಥೆಗಾರ, ಕಾದಂಬರಿಗಾರ, ಸಾಮಾಜಿಕ ಹೋರಾಟಗಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಸರ್ವಾಧ್ಯಕ್ಷತೆಯಲ್ಲಿ ಜರಗಲಿದೆ.     ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಪ್ರಸ್ತಾಪವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನೀಲಾವರ […]

(Kaup) ಕಾಪು : ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವು ನ. 15ರಂದು, ಶನಿವಾರ, ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಕನ್ನಡದ ಖ್ಯಾತ ಕಥೆಗಾರ, ಕಾದಂಬರಿಗಾರ, ಸಾಮಾಜಿಕ ಹೋರಾಟಗಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಸರ್ವಾಧ್ಯಕ್ಷತೆಯಲ್ಲಿ ಜರಗಲಿದೆ.

    ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಪ್ರಸ್ತಾಪವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯು ಸಮ್ಮತಿಸಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಡಲತಡಿಯ ಹೆಜಮಾಡಿಯಲ್ಲಿ ನಡೆಯುವ ಕನ್ನಡದ ನುಡಿತೇರಿನ ಸಂಭ್ರಮದಲ್ಲಿ, ವಿಚಾರಗೋಷ್ಠಿ, ಬಹುಭಾಷಾ ಕವಿಗೋಷ್ಠಿ, ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮ, ಸಿರಿಗನ್ನಡ ರಸಪ್ರಶ್ನೆ, ಸಂವಾದ, ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ವೈವಿಧ್ಯ ಸಾಕಾರಗೊಳ್ಳಲಿವೆ. ಕಲಾ, ಪುಸ್ತಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

     ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿಯವರು 1949ರ ಜೂನ್ 25ರಂದು ಬಾರಕೂರಿನಲ್ಲಿ ಜನಿಸಿದರು. ಕಾಪು ತಾಲೂಕಿನ ಕಟ್ಪಾಡಿಯಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದ ಅವರು, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಕಟ್ಪಾಡಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ಅವರು, ಪ್ರಸ್ತುತ ಕಟ್ಪಾಡಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

    ಕರಾವಳಿಯ ಸಾಮಾಜಿಕ ಬದುಕು, ಸೌಹಾರ್ದ ಸಂಸ್ಕೃತಿಯ ಹಿನ್ನೆಲೆಯಲ್ಲಿ, ವಿವಿಧ ಸೃಜನಶೀಲ ಆಯಾಮಗಳಿಂದ, ವಿಶಿಷ್ಟ ನಿರೂಪಣಾ ಶೈಲಿಯೊಂದಿಗೆ ಅವರು ಹಲವಾರು ಕಥೆ, ಕಾದಂಬರಿ, ಲೇಖನ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

     ಗೋರಿ ಕಟ್ಟಿಕೊಂಡವರು, ನೋಂಬು, ದಜ್ಜಾಲ, ಅತ್ತರ್ ಹಾಜಿಕಾ ಮತ್ತು ಇತರ ಕಥೆಗಳು, ಪಚ್ಚ ಕುದುರೆ, ಕಡವು ಮನೆ, ಕುಂದಾಪ್ರ ಅವರ ಪ್ರಮುಖ ಕಥಾಸಂಕಲನಗಳು.

     ಸರಕುಗಳು, ಕಚ್ಚಾದ ಅವರ ಪ್ರಸಿದ್ಧ ಕಾದಂಬರಿಗಳಾಗಿವೆ. ಕೇರಳದಲ್ಲಿ ಹದಿನೈದು ದಿನಗಳು, ರಾಷ್ಟ್ರೀಯತೆ ಮತ್ತು ಮುಸ್ಲಿಮರು, ಕೈಯೂರಿನ ರೈತವೀರರು, ಸೂಫಿ ಸಂತರು, ಸೂಫಿ ಮಹಿಳೆಯರು, ಕೋಮು ಹಿಂಸೆ ನಿಯಂತ್ರಣಾ ಮಸೂದೆ, ಸೂಫಿ ಅಧ್ಯಾತ್ಮ ದರ್ಶನ ಸಹಿತ ಇನ್ನಿತರ ಮಹತ್ವದ ಕೃತಿಗಳನ್ನು ಅವರು ರಚಿಸಿದ್ದಾರೆ.

    ಬೇರೂತಿನಿಂದ ಜರೂಸಲೇಮಿಗೆ, ಸಾದತ್ ಹಸನ್ ಮಂಟೊರವರ ‘ದೇಶವಿಭಜನೆಯ ಕಥೆಗಳು, ಇಸ್ಮತ್ ಚುಗ್ತಾಯಿ ಮತ್ತಿತರ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಟ್ಪಾಡಿಯವರ ಕೃತಿಗಳು ಹಿಂದಿ,  ಗುಜರಾತಿ, ಮರಾಠಿ, ತಮಿಳು, ಬಂಗಾಳಿ, ಮಲಯಾಳ, ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡಿವೆ.

     ಫಕೀರ್ ಮುಹಮ್ಮದ್ ರವರು ಸಾಮಾಜಿಕ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2007ರಲ್ಲಿ ಚಿಕ್ಕಮಗಳೂರಿನಲ್ಲಿ ಜರಗಿದ ಅಖಿಲ ಭಾರತ ಬ್ಯಾರಿಭಾಷಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

    ರಾಷ್ಟ್ರೀಯ ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು, ಅನುವಾದ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ತುಳುಶ್ರೀ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಆಳ್ವಾಸ್ ವಿಶ್ವ ನುಡಿಸಿರಿ ಪ್ರಶಸ್ತಿ, ಸದ್ಭಾವನಾ ಪ್ರಶಸ್ತಿ, ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ, ಇತ್ಯಾದಿಗಳು ಕಟ್ಪಾಡಿಯವರಿಗೆ ಸಂದ ಪ್ರಮುಖ ಪುರಸ್ಕಾರಗಳಾಗಿವೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.