ಕೊಡವೂರು, ಪಾಳೆಕಟ್ಟೆ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಚಾಲನೆ
ಪರಿಶಿಷ್ಟ ಜಾತಿ, ಪಂಗಡಗಳ ಕುಟುಂಬದ ಸದಸ್ಯರಿಗೆ ಹೆಲ್ತ್ ಕಾರ್ಡ್ ವಿರಿಸಿದ ಶಾಸಕ ಯಶ್ಪಾಲ್
(Udupi) ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣರವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮೂಲಕ ಮಂಜೂರುಗೊಂಡ 50 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ಚರಂಡಿ ಸಹಿತ ರಸ್ತೆ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣರವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಪಾಳೆಕಟ್ಟೆ ಭಾಗದ ಜನತೆಯ ಬಹುದಿನದ ಬೇಡಿಕೆಯಂತೆ ವಿಶೇಷ ಮುತುವರ್ಜಿ ವಹಿಸಿ 50 ಲಕ್ಷ ವೆಚ್ಚದಲ್ಲಿ ಚರಂಡಿ ಸಹಿತ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕೊಡವೂರು ವಾರ್ಡಿನ ಇತರ ಕಾಮಗಾರಿಗಳ ಅನುಷ್ಠಾನಕ್ಕೆ ಶೀಘ್ರ ಕ್ರಮ ವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊಡವೂರು ವಾರ್ಡಿನ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುಟುಂಬದ ಸದಸ್ಯರಿಗೆ ಉಡುಪಿ ನಗರಸಭೆಯಿಂದ ನೀಡುವ ಹೆಲ್ತ್ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ಶಾಸಕರು ವಿತರಿಸಿದರು.
ನಗರಸಭೆ ಸದಸ್ಯರಾದ ವಿಜಯ ಕೊಡವೂರು ಹೆಲ್ತ್ ಕಾರ್ಡಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಕೊಡವೂರು ವಾರ್ಡಿನಲ್ಲಿ ಮಂಜೂರುಗೊಂಡಿರುವ ಶೀಘ್ರದಲ್ಲಿ ಆರಂಭಗೊಳ್ಳುವ ವಿವಿಧ ಕಾಮಗಾರಿಗಳ ಬಗ್ಗೆ ಹಾಗೂ ಅಗತ್ಯ ಬೇಡಿಕೆ ಇರುವ ಕಾಮಗಾರಿಗಳ ಬಗ್ಗೆ ಶಾಸಕರಿಗೆ ಜನತೆಯ ಪರವಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಡವೂರು ವಾರ್ಡ್ ಸಮಿತಿ ಅಧ್ಯಕ್ಷ ವಿನಯ ಕುಮಾರ್, ಶ್ರೀ ಮೂಕಾಂಬಿಕಾ ಭಜನಾ ಮಂದಿರ ಪಾಳೆಕಟ್ಟೆ ಅಧ್ಯಕ್ಷ ಹರೀಶ್ ಕರ್ಕೇರ, ಸ್ಥಳೀಯ ಮುಖಂಡರಾದ ಪ್ರಭಾತ್ ಕೊಡವೂರು, ಶ್ರೀಮತಿ ಯಶೋಧ ರಾಜೇಂದ್ರ ಬಾಚನ ಬೈಲು ಮೊದಲಾದವರು ಉಪಸ್ಥಿತರಿದ್ದರು.

