ಹೆಜಮಾಡಿ ಗರಡಿ ನೇಮೋತ್ಸವ : ವಯೋವೃದ್ಧೆಯ ಚಿನ್ನದ ಸರ ಎಗರಿಸಿದ ಕಳ್ಳಿಯರು
ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ, ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
(pdubidri) ಪಡುಬಿದ್ರಿ : ಹೆಜಮಾಡಿಯ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಡಿ. 24ರಂದು ನಡೆದ ವಾರ್ಷಿಕ ನೇಮೋತ್ಸವದಂದು ಗರಡಿಯ ಒಳಗೆ ವೃದ್ದೆಯೋರ್ವರ ಕೊರಳಿನಿಂದ ಮೂರು ಪವನ್ ತೂಕದ ಬಂಗಾರದ ಸರವನ್ನು ಮೂವರು ಮಹಿಳೆರ ತಂಡ ಎಗರಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳ್ಳರ ತಂಡದಲ್ಲಿ ಮೂವರು ಮಹಿಳೆಯರು ಇರುವುದು ಕಂಡುಬಂದಿದೆ. ಗರಡಿಯ ಒಳಭಾಗದಲ್ಲಿ ನೇಮೋತ್ಸವದ ದಿನ ಮಧ್ಯಾಹ್ನ ಭಕ್ತರು ಪ್ರಾರ್ಥಿಸಿ, ಗಂಧ ಪ್ರಸಾದ ತೆಗೆದುಕೊಳ್ಳುವ ಸಮಯ ಕಳ್ಳರ ಕರಾಮತ್ತು ನಡೆದಿದೆ.
ವೃದ್ಧ ಮಹಿಳೆಯು ಹೊರಡಲು ಅಣಿಯಾಗುತ್ತಿದ್ದಂತೆ ಸಹಾಯ ಮಾಡುವ ನೆಪದಲ್ಲಿ ಇಬ್ಬರು ಮಹಿಳೆಯರು ವೃದ್ಧೆಗೆ ತಾಗಿಕೊಂಡಿದ್ದು, ಹಿಂದಿನಿಂದ ಓರ್ವ ಮಹಿಳೆ ಕತ್ತಿನಿಂದ ಸರ ಎಗರಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸರ ಎಗರಿಸಿ ಮೂವರೂ ಪರಾರಿಯಾಗಿದ್ದಾರೆ.
ಸಂತ್ರಸ್ತೆ ಮಹಿಳೆ ಕಮಲ (78) ತನ್ನ ಮಗಳು, ಅಳಿಯ, ಮೊಮ್ಮಗಳ ಜೊತೆಗೆ ತೆರಳಿದ್ದರು. ಅಲ್ಲಿಗೆ ಬಂದ ತನ್ನ ಸಂಬಂಧಿಯೋರ್ವರಿಂದ ಚಿನ್ನದ ಸರ ಇಲ್ಲದ ಬಗ್ಗೆ ವೃದ್ದೆಗೆ ಅರಿವಾಗಿದೆ.
ಡಿ.25ರಂದು ಗರಡಿಯ ಆಡಳಿತ ಮಂಡಳಿಗೆ ವಿಷಯ ತಿಳಿದು ಸಿಸಿ ಕ್ಯಾಮರ ಪರಿಶೀಲಿಸಿದಾಗ ಮೂವರು ಕಳ್ಳಿಯರ ದೃಶ್ಯ ಕಂಡು ಬಂದಿದೆ.
ಈ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

