ನರೇಗಾ ಯೋಜನೆಯಿಂದ ಬಡವರ ಬಾಳಿಗೆ ಬೆಳಕು : ಡಾ. ದೇವಿಪ್ರಸಾದ್ ಶೆಟ್ಟಿ
ಬೆಳಪು ಮಳಂಗೋಳಿಯಲ್ಲಿ ತೋಡು ಹೂಳೆತ್ತುವ ಕಾಮಗಾರಿಗೆ ಚಾಲನೆ
(Belapu) ಬೆಳಪು: ಭಾರತ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಿಂದ ಬಡಜನರಿಗೆ ಉದ್ಯೋಗ ಭದ್ರತೆಯೊಂದಿಗೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.
ಅವರು ಬೆಳಪುವಿನ ಮಳಂಗೋಳಿಯಲ್ಲಿ ತೋಡು ಹೂಳೆತ್ತುವ ಸಮುದಾಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ, ಉದ್ಯೋಗವಿಲ್ಲದೆ ಮಹಿಳೆಯರು, ಯುವಕರು, ನಿರುದ್ಯೋಗಿಗಳು ಕೂಲಿಗಾಗಿ ಪರದಾಡುವ ಸಮಯದಲ್ಲಿ ಸ್ಥಳೀಯ ಸರಕಾರ ಅವರನ್ನು ಗುರುತಿಸಿ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗ ನೀಡುವ ಭಾರತ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
ಹಿಂದಿನ ಪ್ರಧಾನ ಮಂತ್ರಿ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ರವರ ದೂರದೃಷ್ಟಿತ್ವದ ಕಲ್ಪನೆ ಇದಾಗಿದ್ದು, ಯಾರಿಗೆ ಉದ್ಯೋಗದ ಅವಶ್ಯಕತೆ ಇದೆ ಅವರು ಗ್ರಾಮ ಪಂಚಾಯತ್ ಗಳಲ್ಲಿ ಉದ್ಯೋಗ ಕಾರ್ಡ್ ಪಡೆದುಕೊಂಡು ಕೆಲಸ ನಿರ್ವಹಿಸುವ ಅವಕಾಶವಿದ್ದು ಇದಕ್ಕೆ ಪೂರಕವಾಗಿ ಅವರಿಗೆ ಕೂಲಿ ದೊರಕುತ್ತದೆಂದು ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿ’ಸೋಜ, ಕಾರ್ಯದರ್ಶಿ ಚಂದ್ರಾವತಿ ವಿ. ಆಚಾರ್ಯ, ನರೇಗಾ ಕೂಲಿಕಾರರು, ಗ್ರಂಥಾಲಯ ಸಿಬ್ಬಂದಿ ಮತ್ತು ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

