• Home  
  • ಕಾಪು: ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ, ಚಾಲಕರ ಪ್ರತಿಭಟನೆ (Kaup: High Court orders rickshaw stand to be cleared, drivers protest)
- Uncategorised

ಕಾಪು: ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ, ಚಾಲಕರ ಪ್ರತಿಭಟನೆ (Kaup: High Court orders rickshaw stand to be cleared, drivers protest)

Share: ಕಾಪು: ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ, ಚಾಲಕರ ಆಕ್ಷೇಪ ರಿಕ್ಷಾ ಚಾಲಕರಿಂದ ರಿಕ್ಷಾ ಸಮೇತವಾಗಿ ಪುರಸಭಾ ಕಛೇರಿಗೆ ಆಗಮಿಸಿ ಮುತ್ತಿಗೆ (Kaup) ಕಾಪು: ಕಾಪು ಪೇಟೆಯ ಖಾಸಗಿ ಕಟ್ಟಡವೊಂದರ ಮುಂಭಾಗದಲ್ಲಿ ಇರುವ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಉಚ್ಛ ನ್ಯಾಯಾಲಯ ಆದೇಶದಂತೆ, ಪುರಸಭೆಯು ರಿಕ್ಷಾ ನಿಲ್ದಾಣ ತೆರವಿಕೆ ಮುಂದಾಗಿದ್ದು ಪುರಸಭೆಯ ಕ್ರಮಕ್ಕೆ ರಿಕ್ಷಾ ಚಾಲಕರಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.      ಕಾಪು ಪೇಟೆಯಲ್ಲಿ ಖಾಸಗಿ ಕುಟುಂಬಕ್ಕೆ ಸೇರಿದ ಜಾಗ ಮತ್ತು ಕಟ್ಟಡದ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣದಿಂದಾಗಿ […]

(Kaup) ಕಾಪು: ಕಾಪು ಪೇಟೆಯ ಖಾಸಗಿ ಕಟ್ಟಡವೊಂದರ ಮುಂಭಾಗದಲ್ಲಿ ಇರುವ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಉಚ್ಛ ನ್ಯಾಯಾಲಯ ಆದೇಶದಂತೆ, ಪುರಸಭೆಯು ರಿಕ್ಷಾ ನಿಲ್ದಾಣ ತೆರವಿಕೆ ಮುಂದಾಗಿದ್ದು ಪುರಸಭೆಯ ಕ್ರಮಕ್ಕೆ ರಿಕ್ಷಾ ಚಾಲಕರಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.

     ಕಾಪು ಪೇಟೆಯಲ್ಲಿ ಖಾಸಗಿ ಕುಟುಂಬಕ್ಕೆ ಸೇರಿದ ಜಾಗ ಮತ್ತು ಕಟ್ಟಡದ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣದಿಂದಾಗಿ ಅಂಗಡಿಯಲ್ಲಿರುವ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಖಾಸಗಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಿ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಸೂಚನೆ ನೀಡಿತ್ತು.

     ಹೈಕೋರ್ಟ್ ನೀಡಿರುವ ಆದೇಶದಂತೆ ಕಾಪು ಪುರಸಭೆಯು ರಿಕ್ಷಾ ನಿಲ್ದಾಣ ತೆರವುಗೊಳಿಸುವ ವಿಚಾರದಲ್ಲಿ ಚರ್ಚಿಸಲು ಮತ್ತು ಆದೇಶ ಜಾರಿಯ ಕುರಿತಾಗಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಪ್ರತಿನಿಧಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

    ಏಕಾಏಕಿಯಾಗಿ ಬಂದ ಹೈಕೋರ್ಟ್ನ ಆದೇಶದಿಂದ ಗಲಿಬಿಲಿಗೊಂಡ ಕಾಪು ಪೇಟೆಯ ಎಲ್ಲಾ ರಿಕ್ಷಾ ಚಾಲಕರು ರಿಕ್ಷಾ ಸಮೇತವಾಗಿ ಪುರಸಭಾ ಕಛೇರಿಗೆ ಆಗಮಿಸಿ, ಮುತ್ತಿಗೆ ಹಾಕಲು ಮುಂದಾದರು. ಇದರಿಂದಾಗಿ ಪುರಸಭೆ ಮುಂಭಾಗ ಕ್ಷಣಕಾಲ ಗೊಂದಲ ಉಂಟಾಯಿತು.

    ರಿಕ್ಷಾ ಚಾಲಕರು ರಿಕ್ಷಾ ಸಮೇತವಾಗಿ ಪುರಸಭೆಗೆ ಆಗಮಿಸಿದ್ದನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ, ಅವರನ್ನು ಸಂತೈಸಲು‌ ಪ್ರಯತ್ನಿಸಿದ್ದು ಸಾರ್ವಜನಿಕರಿಗೆ ತೊಂದರೆಯಾಗ ಬಾರದೆಂಬ ದೃಷ್ಟಿಯಿಂದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು ರಿಕ್ಷಾ ಚಾಲಕರ ಮನವೊಲಿಸಿ, ವಾಪಸ್ಸು ಕಳುಹಿಸಿದ್ದರು.

   ಪುರಸಭೆ ಮುಖ್ಯಾಧಿಕಾರಿ, ಸದಸ್ಯರು ಮತ್ತು ಪೊಲೀಸ್ ಅಧಿಕಾರಿಗಳ ಮಾತು ಕೇಳಿ ಪುರಸಭೆ ಆವರಣದಲ್ಲಿ ಜಮಾವಣೆಗೊಂಡಿದ್ದ ರಿಕ್ಷಾ ಚಾಲಕರು ರಿಕ್ಷಾ ಸಮೇತವಾಗಿ ಕಾಪು ಪೇಟೆಗೆ ತೆರಳಿ ನಿಲ್ದಾಣದ ಮುಂಭಾಗ ರಿಕ್ಷಾಗಳನ್ನು ಇರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಬಾಡಿಗೆ ನಡೆಸದೇ ಮೌನ ಪ್ರತಿಭಟನೆಗೆ ಮುಂದಾದರು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪುರಸಭಾ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಕಾಪು ಕ್ರೈಂ ಎಸ್ಸೈ ಶುಭಕರ, ಸ್ಥಾಯಿ‌ ಸಮಿತಿ ಅಧ್ಯಕ್ಷ ಕಿರಣ್ ಆಳ್ವ ಹಾಗೂ ಅಧಿಕಾರಿಗಳು ಮತ್ತು ಪ್ರತಿನಿಧಿಗಳಿಗೆ ರಿಕ್ಷಾ ಚಾಲಕರು ಮುತ್ತಿಗೆ ಹಾಕಿ ತಮ್ಮ ಪ್ರತಿಭಟ‌ನೆ ವ್ಯಕ್ತಪಡಿಸಿದರು.

   ಪುರಸಭಾ ಮುಖ್ಯಾಧಿಕಾರಿ ಮಾತನಾಡಿ, ಸರಕಾರಿ‌ ಅಧಿಕಾರಿಗಳಾಗಿ ಹೈಕೋರ್ಟ್ನ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ರಿಕ್ಷಾ ಚಾಲಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು.‌ ಸದ್ಯಕ್ಕೆ  ಹೈಕೋರ್ಟ್ ನ ಆದೇಶದಂತೆ ರಿಕ್ಷಾ ನಿಲ್ದಾಣವನ್ನು ಮತ್ತು ನಿಲ್ದಾಣ ಮುಂಭಾಗದ ಫಲಕವನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದರು.

    ಇದಕ್ಕೆ ರಿಕ್ಷಾ ಚಾಲಕರೆಲ್ಲರೂ ಆಕ್ಷೇಪ ವ್ಯಕ್ತಪಡಿಸಿದರು. ಪುರಸಭಾ ಸದಸ್ಯರಾದ ಶೈಲೇಶ್ ಅಮೀನ್, ಅನಿಲ್ ಕುಮಾರ್, ಸರಿತಾ ಪೂಜಾರಿ ಮೊದಲಾದವರು ದನಿಗೂಡಿಸಿದರು. ಈ ವೇಳೆ ಕ್ಷಣಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

   ಪುರಸಭೆ ಮುಖ್ಯಾಧಿಕಾರಿ ಹೈಕೋರ್ಟ್ನ ಆದೇಶ ಪಾಲನೆಗೆ ಸಹಕರಿಸುವಂತೆ ಮನವಿ ಮಾಡಿದರು. ಎರಡು ಮೂರು ಸುತ್ತಿನ ಮಾತುಕತೆಯ ಬಳಿಕ ರಿಕ್ಷಾ ಚಾಲಕರು, ನಿಲ್ದಾಣದ ಬೋರ್ಡ್ ತೆರವಿಗೆ ಕೆಲವು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ತಕ್ಷಣಕ್ಕೆ ನಿರ್ಧಾರ‌ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಿಕ್ಷಾ ಯೂನಿಯನ್ ಪದಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಅವರು ಭರವಸೆ ನೀಡಿದರು.

   ಹೈಕೋರ್ಟ್ ಆದೇಶಕ್ಕೆ ಗೌರವ ಸೂಚಿಸುತ್ತೇವೆ.‌ ಆದರೆ ನಮಗೆ ಯಾವುದೇ ನೋಟೀಸ್ ನೀಡದೇ ಈ ರೀತಿಯಲ್ಲಿ ರಿಕ್ಷಾ ನಿಲ್ದಾಣ ತೆರವಿಗೆ ಮುಂದಾಗಿರುವುದು ಬೇಸರ ತಂದಿದೆ. ಪಿಡಬ್ಲೂಡಿ ರಸ್ತೆಯಲ್ಲಿರುವ ಪೇಟೆಯ ರಿಕ್ಷಾ ನಿಲ್ದಾಣ ತೆರವಿಗಾಗಿ ಹೈಕೋರ್ಟ್ ಆದೇಶಿಸಿದ್ದು, ಪುರಸಭೆ, ಜಿಲ್ಲಾಧಿಕಾರಿ, ಆರ್.ಟಿ.ಒಗೆ ನೊಟೀಸ್ ಜಾರಿ ಮಾಡಿರುವುದರ ವಿರುದ್ಧ ನಾವು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ‌ ಎಂದು ರಿಕ್ಷಾ ಯೂನಿಯನ್ ಅಧ್ಯಕ್ಷರಾದ ಶೈಲೇಶ್ ಅಮೀನ್, ಅಬ್ದುಲ್ ರಜಾಕ್ ಕೆ.ಎಂ. ತಿಳಿಸಿದ್ದಾರೆ.

   ಕಾಪು ಪೇಟೆಯಲ್ಲಿ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಮತ್ತು ನ್ಯೂ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಇದ್ದು, ಸುಮಾರು 360ಕ್ಕೂ ಅಧಿಕ ರಿಕ್ಷಾಗಳು ಕಾಪು ಪೇಟೆ ಮತ್ತು ಹೈವೇ ಪರಿಸರದಲ್ಲಿ ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿವೆ.

   ಹೈಕೋರ್ಟ್ ಆದೇಶದ ಪಾಲನೆಗೆ ಪುರಸಭೆ ಮುಂದಾಗಿದ್ದು, ಇದಕ್ಕೆ ರಿಕ್ಷಾ ಚಾಲಕರೆಲ್ಲರಿಂದಲೂ ವಿರೋಧ ವ್ಯಕ್ತವಾಗಿದೆ. ರಿಕ್ಷಾ ನಿಲ್ದಾಣ ತೆರವು ವಿಚಾರದಲ್ಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ. ರಿಕ್ಷಾ ನಿಲ್ದಾಣ ತೆರವಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ತೆರವು ಮಾಡುವುದು ಪುರಸಭೆಗೆ ಅನಿವಾರ್ಯವೇ ಆದರೆ ಪರ್ಯಾಯ ಪ್ರದೇಶವನ್ನು ಗುರುತಿಸಿ, ನಿಲ್ದಾಣ ರಚಿಸಿ ಕೊಟ್ಟು ತೆರವು ನಡೆಸಲಿ. ಅಷ್ಟರವರೆಗೆ ಕಾಲಾವಕಾಶ ಮಾಡಿಕೊಡುವಂತೆ ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.

   ಜಂಟಿ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಪದಾಧಿಕಾರಿಗಳಾದ ಉಮೇಶ್ ಪೂಜಾರಿ, ಚಂದ್ರ ಮಲ್ಲಾರು, ಮೊಹಮ್ಮದ್ ಅಲಿ, ರವಿ ಶೆಟ್ಟಿ, ಉಮ್ಮರ್ ಗಿಳಿ, ಇಲಿಯಾಸ್ ಹಾಗೂ ರಿಕ್ಷಾ ಚಾಲಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.