ಉಡುಪಿ: ಕುಂಜಿಬೆಟ್ಟು ಟಿ. ಎ. ಪೈ ಇಂಗ್ಲಿಷ್ ವಿದ್ಯಾರ್ಥಿಗಳಿಬ್ಬರಿಗೆ INSPIRE–MANAK ಪ್ರಶಸ್ತಿ
ಪುರಸ್ಕೃತ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದಾ ಶೆಟ್ಟಿ
(Udupi) ಉಡುಪಿ: ಕುಂಜಿಬೆಟ್ಟು ಟಿ. ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನ ಇಬ್ಬರು ವಿದ್ಯಾರ್ಥಿಗಳು 2025–26ನೇ ಸಾಲಿನ ಪ್ರತಿಷ್ಠಿತ INSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆಯಾಗಿದ್ದಾರೆ.
ಈ ಯೋಜನೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಮುಖ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅದರ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನೋವೇಶನ್ ಫೌಂಡೇಶನ್–ಇಂಡಿಯಾ ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ.
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ 9ನೇ ತರಗತಿಯ ಅವನೀಶ್ ಕೆ. ಎಸ್. ಹಾಗೂ 10ನೇ ತರಗತಿಯ ದೀಪೇಶ್ ದೀಪಕ್ ಶೆಣೈ (ಕರ್ನಾಟಕ ಸರ್ಕಾರದ “ಹೊಯ್ಸಳ ಶೌರ್ಯ ಪ್ರಶಸ್ತಿ 2025” ಪುರಸ್ಕೃತರು) ವಿಜ್ಞಾನಾಧಾರಿತ ಹಾಗೂ ಸಮಾಜಮುಖಿ ನವೀನ ಕಲ್ಪನೆಗಳಿಗಾಗಿ ಆಯ್ಕೆಯಾಗಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದಾ ಶೆಟ್ಟಿ ಪುರಸ್ಕೃತ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಸೃಜನಶೀಲತೆ, ವೈಜ್ಞಾನಿಕ ಮನೋಭಾವ ಮತ್ತು ನವೀನ ಚಿಂತನೆಗೆ ತೋರಿದ ಸಮರ್ಪಣೆಯನ್ನು ಪ್ರಶಂಸಿ, ಈ ಸಾಧನೆ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವಲ್ಲಿ ಶಾಲೆಯ ನಿರಂತರ ಪ್ರಯತ್ನಗಳ ಪ್ರತಿಫಲವಾಗಿದೆ ಎಂದು ಹೇಳಿದರು.
ಜೊತೆಗೆ ಶಿಕ್ಷಣ ಇಲಾಖೆಯಿಂದ ಆಯೋಜಿಸಲಿರುವ ಜಿಲ್ಲಾ ಮಟ್ಟದ ವಿಜ್ಞಾನ ಪ್ರದರ್ಶನ ಹಾಗೂ ಯೋಜನಾ ಸ್ಪರ್ಧೆ (DLEPCs) ಯಲ್ಲಿ ಭಾಗವಾಗಿಸಲು ಅರ್ಹತೆ ಪಡೆದ ಈ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ್ದಾರೆ.
ಇದೇ ಸಂದರ್ಭದಲ್ಲಿ 2026–27ನೇ ಶೈಕ್ಷಣಿಕ ಸಾಲಿನ 8ನೇ ತರಗತಿ ಪ್ರವೇಶಗಳು ಪ್ರಾರಂಭವಾಗಿದ್ದು, ಆಸಕ್ತ ಪೋಷಕರು ಶೀಘ್ರದಲ್ಲೇ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು. ಗುಣಮಟ್ಟದ ಶಿಕ್ಷಣ ಹಾಗೂ ಸಮಗ್ರ ವ್ಯಕ್ತಿತ್ವ ವಿಕಾಸಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಟಿ. ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಅನ್ನು ಮೊದಲ ಆದ್ಯತೆಯಾಗಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನಿನ ಆಡಳಿತಾಧಿಕಾರಿ ಡಾ. ಶ್ರೀಧರ್ ರಂಗನಾಥ ಪೈ ಯವರು ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ಸಂಸ್ಥೆ ಸುವರ್ಣ ಮಹೋತ್ಸವದ ಸಂಭ್ರಮದತ್ತ ಸಾಗುತ್ತಿರುವ ಸಂದರ್ಭದಲ್ಲಿ ಈ ಸಾಧನೆ ಶಾಲೆಗೆ ಮತ್ತೊಂದು ಮಹತ್ವದ ಮೈಲುಗಲ್ಲು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾಲಾ ಬೋಧಕ, ಬೋಧಕೇತರ ಸಿಬ್ಬಂದಿ, ಶಿಕ್ಷಕ-ರಕ್ಷಕ ಸಂಘ, ಶಾಲಾ ಹಳೆವಿದ್ಯಾರ್ಥಿಗಳ ಸಂಘವು ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

