ಮುಲ್ಕಿ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವಯೋ ವೃದ್ಧೆ ಸಾವು
ಮೃತ ದೇಹವನ್ನು ಬಾವಿಯಿಂದ ಹೊರ ತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ
(Mulki) ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮಹಲ್ ಬಳಿ ವೃದ್ಧೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ.
ಮೃತ ವೃದ್ಧೆಯನ್ನು ಬಾದಾಮಿ ಮೂಲದ ಫಕೀರವ್ವ (90) ಎಂದು ಗುರುತಿಸಲಾಗಿದೆ.
ಮೃತ ಫಕೀರವ್ವರವರು ಹಲವಾರು ವರ್ಷಗಳಿಂದ ಮುಲ್ಕಿಯಲ್ಲಿ ನೆಲೆಸಿದ್ದು, ರಾತ್ರಿ ಹೊತ್ತು ಪಂಚಮಹಲ್ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕಟ್ಟಡ ಒಂದರ ಎದುರು ಬದಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಗ್ನಿಶಾಮಕ ದಳ ಆಗಮಿಸಿ ಮೃತ ದೇಹವನ್ನು ಬಾವಿಯಿಂದ ಹೊರ ತೆಗೆದು ಮೂಲ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.

