ಮಲಬಾರ್ ಗೋಲ್ಡ್ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
ಉಡುಪಿಯ ಅಜ್ಜರಕಾಡು ಬಳಿ ಇರುವ ಪುರಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ
(Udupi) ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅಧೀನದಲ್ಲಿರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲೆಯ ಸರಕಾರಿ ಹಾಗೂ ಅನುದಾನಿತ 75 ಕಾಲೇಜುಗಳ 518 ವಿದ್ಯಾರ್ಥಿಗಳಿಗೆ 42ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉಡುಪಿ ಅಜ್ಜರಕಾಡು ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಅವರು ಮಾತನಾಡಿ, ಮಲಬಾರ್ ಗೋಲ್ಡ್ ತನ್ನ ಸಿ ಎಸ್ ಆರ್ ನಿಧಿಯ ದೊಡ್ಡ ಮೊತ್ತ ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವುದು ಅಭಿನಂದನೀಯ. ಮಕ್ಕಳು ಈ ಅವಕಾಶವನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಬೇಕೆಂದು ಹಾರೈಸಿದರು.
ಅಧ್ಯಕ್ಷತೆಯನ್ನು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆಯ ಮುಖ್ಯಸ್ಥ ವಿಜಯ ಕುಮಾರ್ ವಹಿಸಿದ್ದರು.
ಈ ಸಂದರ್ಭ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರೀತಮ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗೆಳೆಯರ ಬಳಗ ಪೆರ್ಡೂರು, ಯಂಗ್ ಸ್ಟಾರ್ ಕಂಡ್ಲೂರು, ಬೆಳಪು ಸ್ಪೋರ್ಟ್ಸ್ ಕ್ಲಬ್, ಕರಕಿರಿ ಫ್ರೆಂಡ್ಸ್ ಸೇವಾ ಬಳಗ, ಜಾನ್ ಗೋಮ್ಸ್ ಇದರ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಸಂಜೆ ಪ್ರಭ ಸಂಪಾದಕ ವೆಂಕಟೇಶ ಪೈ, ಶಿಕ್ಷಕ ಅಲ್ವಿನ್ ದಾಂತೆ ಉಪಸ್ಥಿತರಿದ್ದರು.
ಮಂಗಳೂರು ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ಪ್ತಾಸ್ತಾವಿಕವಾಗಿ ಮಾತನಾಡಿದರು. ಪ್ರಾದೇಶಿಕ ಸಿ.ಎಸ್.ಆರ್ ಉಸ್ತುವಾರಿ ಹೈದರ್ ಕೆ., ಪುರಂದರ ತಿಂಗಳಾಯ, ಮುಸ್ತಫಾ ಎ.ಕೆ, ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಉಪಸ್ಥಿತರಿದ್ದರು.
ನಿವೃತ್ತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

