ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಚಿಕ್ಕೋಡಿ ಸಂಸದೆಗೆ ಮನವಿ
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳಿಂದ ಮನವಿ
(Chikkodi) ಚಿಕ್ಕೋಡಿ : ಕರ್ನಾಟಕ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆಯಾಗಿ ಪರಿವರ್ತನೆಗೊಳಿಸಲು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಕು. ಪ್ರಿಯಾಂಕಾ ಜಾರಕಿಹೊಳಿಯವರಿಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂತ ಶಿರೋಮಣಿ ಕನಕದಾಸರ ಜಯಂತಿ ನಿಮಿತ್ತ ಚಿಕ್ಕೋಡಿಗೆ ಆಗಮಿಸಿರುವ ಸಂಸದೆ . ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಭೇಟಿಯಾದ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕಳೆದ ಮೂರು ದಶಕಗಳಿಂದ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗದೇ ಇರುವುದು ಈ ಭಾಗದ ಜನರ ದುರ್ಭಾಗ್ಯ. ಕೂಡಲೇ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಡಿಸೆಂಬರ್ 2 ರಿಂದ ಹತ್ತು ದಿವಸಗಳ ಕಾಲ ಚಿಕ್ಕೋಡಿಯ ಬಸವ ವೃತ್ತದಲ್ಲಿ ಜಿಲ್ಲೆಯ ಬೇಡಿಕೆಯನ್ನು ಇಟ್ಟು ವಿವಿಧ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಇವರು ಮಾಹಿತಿ ನೀಡಿದರು,
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿಯವರು ಚಿಕ್ಕೋಡಿ ಉಪವಿಭಾಗದ ಎಲ್ಲ ಜನರು ನಮ್ಮ ಹೋರಾಟಕ್ಕೆ ಕೈ ಜೋಡಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಈ ಸಂಧರ್ಭದಲ್ಲಿ ರಮೇಶ ಡಂಗೇರ, ರುದ್ರಯ್ಯಾ ಹಿರೇಮಠ, ಕಲ್ಲಪ್ಪ ಬುರುಡ, ಸಂತೋಷ ಪೂಜೇರಿ, ಸಂಜಯ ಪಾಟೀಲ, ಕುಮಾರ ಪಾಟೀಲ, ರುದ್ರಪ್ಪಾ ಸಂಗಪ್ಪಗೋಳ, ಮಹಾವೀರ ಮೋಹಿತೆ ಸೇರಿದಂತೆ ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಉಪಸ್ಥಿತರಿದ್ದರು.

