ಕವಿ ಮತ್ತು ರವಿ ಇಬ್ಬರೂ ಕಾಣದ್ದನ್ನು ಪತ್ರಕರ್ತರು ಕಾಣುತ್ತಾರೆ: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಪಡುಬಿದ್ರಿಯಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಸ್ನೇಹ ಸಂಗಮ –2026
(Padubidri) ಪಡುಬಿದ್ರಿ : ಕವಿ ಮತ್ತು ರವಿ ಇಬ್ಬರೂ ಕಾಣದ್ದನ್ನು ಪತ್ರಕರ್ತರು ಕಾಣುತ್ತಿದ್ದಾರೆ. ಅತ್ಯಂತ ಗೌರವ ಮತ್ತು ಘನತೆಯ ಸೇವೆ ಪತ್ರಕರ್ತರದ್ದಾಗಿದ್ದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಕಾಪುವಿನಿ ಪತ್ರಕರ್ತರಿಂದ ಆಗುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಶನಿವಾರ ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿಯ ಸಭಾಂಗಣದಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ನೇಹ ಸಂಗಮ -2026 ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪಿಯುಸಿಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ನಂ.1. ಎಸ್ ಎಸ್ ಎಲ್ ಸಿ ಯಲ್ಲಿ ನಂ.2 ಆಗಿದೆ. ಆದರೆ ದುರದೃಷ್ಟವಶಾತ್ ಮಾದಕ ವಸ್ತು ಸೇವನೆಯಲ್ಲಿ ನಂ. 3 ಆಗಿರುವುದು ಖೇದಕರ. ಕಾಲೇಜು ಕ್ಯಾಂಪಸ್ನಲ್ಲಿ ಮಾದಕ ವಸ್ತು ಹೆಚ್ಚು ಹರಿದಾಡುತ್ತಿರುವುದು ಚಿಂತನೆ ಮಾಡಬೇಕಾದ ವಿಷಯವಾಗಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿ, ಪತ್ರಕರ್ತರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಪೊಲೀಸರಿಗೆ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಮನುಷ್ಯ ತಾನು ಬದುಕುವ ಜೊತೆಗೆ ಇತರ ಜೀವಿಗಳೂ ಪ್ರಕೃತಿಯೊಡನೆ ಸಹ್ಯ ಜೀವನ ನಡೆಸುವಂತೆ ಕಾರ್ಯಚಟುವಟಿಕೆ ನಡೆಯಬೇಕಿದೆ. ಇದು ಸಮಾಜದಲ್ಲಿ ಸಮತೋಲ ಕಳೆದುಕೊಳ್ಳುತ್ತಿದ್ದು, ಪತ್ರಿಕೋದ್ಯಮವು ಈ ಬಗ್ಗೆ ವಿಮರ್ಶಾತ್ಮಕವಾಗಿ ಹೆಚ್ಚಿನ ಎಚ್ಚರಿಕೆ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದ ಅವರು, ಪತ್ರಕರ್ತರ ಮಕ್ಕಳೂ ಕೂಡಾ ಶೈಕ್ಷಣಿಕ ಸಾಧನೆಯನ್ನು ಇನ್ನಷ್ಟು ಮಾಡಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಾದ ಎಸ್ಎಸ್ಎಲ್ ಸಿ ಸಾಧಕರಾದ ಅನಿಶಾ ಆಚಾರ್ಯ ಉಚ್ಚಿಲ, ಎಚ್. ಪವನ್, ಪಿಯುಸಿ ಸಾಧಕ ಯಶಸ್ ಪಿ. ಸುವರ್ಣ ಹಾಗೂ ಮಾಜಿ ಅಧ್ಯಕ್ಷ ಹರೀಶ್ ಹೆಜಮಾಡಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕಾರ್ಯದರ್ಶಿ ಸುರೇಶ್ ಎರ್ಮಾಳು, ಕಾಪು ತಾಲೂಕು ಸಂಘದ ಕೋಶಾಧಿಕಾರಿ ಸಂತೋಷ್ ನಾಯ್ಕ್ ಇದ್ದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ರಾಮಚಂದ್ರ ಆಚಾರ್ಯ ನಿರೂಪಿಸಿದರು. ರಾಕೇಶ್ ಕುಂಜೂರು ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.

