ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಬೆಳಪುವಿನಲ್ಲಿ ಕಾಪು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ
ಮಾಜಿ ಸಚಿವ ವಿನಯ್ ಕುಮಾರ್ ನೇತೃತ್ವದಲ್ಲಿ ನೀಟ್ ಪ್ರಶ್ನೆಪತ್ರಿಕೆ, ಎಸ್ ಐಆರ್, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
(Belapu) ಬೆಳಪು: ಎಸ್ಐಆರ್, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಬೆಲೆ ಏರಿಕೆ ಮತ್ತು ಹತ್ತು ಹಲವು ಸಮಸ್ಯೆಗಳನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಮಂಗಳವಾರ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಪು ಕಾಂಗ್ರೆಸ್ ಆಯೋಜನೆಯಲ್ಲಿ ಬೆಳಪು ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೇಂದ್ರ ಸರ್ಕಾರವು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಮತಗಳನ್ನು ರದ್ದುಗೊಳಿಸಿ ತಮ್ಮ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಬೇಕೆಂಬ ಧೋರಣೆ ಹಮ್ಮಿಕೊಂಡಿದ್ದು, ಕೇವಲ ಐದು ಪ್ರತಿಶತ ಇರುವ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡಲು ಹೊರಟಿದೆ. ಇದೇ ರೀತಿ ಕೇಂದ್ರ ಸರಕಾರವು ಬಡವರ ವಿರೋಧಿ ಧೋರಣೆಯನ್ನು ಮುಂದುವರಿಸಿದರೆ, ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ದೇಶವ್ಯಾಪಿ ಉಗ್ರ ಪ್ರತಿಭಟನೆ ಕೈಗೊಳ್ಳಲಿದೆ ಎಂದರು.
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ಪಕ್ಷ ನೇರ ಕೈವಾಡ ಇದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರವರು ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಮದ್ಯಪ್ರಾಚ್ಯ ದೇಶಗಳ ಯುದ್ಧದ ನೆಪವನ್ನಿಟ್ಟು ಕೇಂದ್ರ ಬಿಜೆಪಿ ಸರಕಾರವು ಬೇಕಾಬಿಟ್ಟಿ ಬೆಲೆ ಏರಿಸಿ, ಬಡವರನ್ನು ನರಕದ ಕೂಪಕ್ಕೆ ತಳ್ಳುತ್ತಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ನಾವು ಒದ್ದೋಡಿಸದಿದ್ದರೆ ಮುಂದೆ ನಮಗೆ ಕಂಠಕ ಕಾದಿದೆ ಎಂದರು.
ಕಾಪು ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಎಂ ಎ ಗಫೂರ್, ನವೀನ್ ನವೀನ್ ಚಂದ್ರ ಶೆಟ್ಟಿ, ದಿವಾಕರ್ ಶೆಟ್ಟಿ ಕಾಪು, ನಿರಂಜನ್ ಶೆಟ್ಟಿಯವರು ಮಾತನಾಡಿದರು.
ಪ್ರತಿಭಟನೆಯಲ್ಲಿ ನವೀನ್ ಚಂದ್ರ ಸುವರ್ಣ, ನವೀನ್ ಎನ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಶಿವಾಜಿ ಸುವರ್ಣ, ಶ್ಯಾಮಲಾ ಶೆಟ್ಟಿ, ಶರ್ಫುದ್ಧೀನ್ ಶೇಖ್, ಮಹಮ್ಮದ್ ನಿಯಾಜ್, ರಮೀಝ್ ಹುಸೇನ್, ಗಿರೀಶ್ ಕೋಟ್ಯಾನ್, ಹಸನಬ್ಬ ಶೇಖ್, ಸುಧೀರ್ ಕರ್ಕೇರಾ, ಪ್ರಭೋದ್ ಚಂದ್ರ ಹೆಜಮಾಡಿ, ಕರುಣಾಕರ ಪೂಜಾರಿ ಪಡುಬಿದ್ರಿ, ಪ್ರಸಾದ್ ಜತ್ತನ್ನ, ಆಶಾ ಕಟಪಾಡಿ, ಜ್ಯೋತಿ ಮೆನನ್, ಅಶೋಕ್ ನಾಯರಿ, ವಾಹಿದ್, ಸರಸು ಬಂಗೇರಾ,ಅಜೀಜ್ ಹೆಜಮಾಡಿ, ರಿಯಾಜ್, ಯಶವಂತ್ ಶೆಟ್ಟಿ ಎಲ್ಲೂರು, ಪ್ರಭಾಕರ್ ಆಚಾರ್ಯ, ಯಶವಂತ ಪಲಿಮಾರು ಮತ್ತಿತರರು ಉಪಸ್ಥಿತರಿದ್ದರು.
