ಉದ್ಯಮಿ, ಧಾರ್ಮಿಕ-ಸಾಮಾಜಿಕ ಮುಖಂಡ ಸಖೇಂದ್ರ ಸುವರ್ಣ ಹೃದಯಾಘಾತದಿಂದ ನಿಧನ
ಕಾಪು ಬಿಲ್ಲವರ ಸಹಾಯಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
(Kaup) ಕಾಪು, ಜು. 28: ಕಾಪು ಬಿಲ್ಲವರ ಸಹಾಯಕ ಸಂಘದ ಉಪಾಧ್ಯಕ್ಷ, ಉದ್ಯಮಿ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡ ಸಖೇಂದ್ರ ಬಿ. ಸುವರ್ಣ (69) ಅವರು ಮಂಗಳವಾರ ಬೆಳಗ್ಗಿನ ಜಾವ ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಸಹೋದರರಾದ ಗಂಗಾಧರ ಸುವರ್ಣ, ಕಮಲಾಕ್ಷ ಸುವರ್ಣ ಸೇರಿದಂತೆ ಐದು ಮಂದಿ ಸಹೋದರಿಯರನ್ನು ಅಗಲಿದ್ದಾರೆ.
ಸಖೇಂದ್ರ ಸುವರ್ಣ ಅವರು ಕಾಪು ಬಿಲ್ಲವರ ಸಹಾಯಕ ಸಂಘದ ಉಪಾಧ್ಯಕ್ಷರಾಗಿ, ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರರಾಗಿ, ಕಾಪು ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಕಾಪು ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸಖೇಂದ್ರ ಸುವರ್ಣ ಅವರ ನಿಧನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

