ಜೆನ್-ಝಿ ಕಲಿಸಿದ ಪಾಠಗಳು : ಡಾ. ಸಚಿನ್ ಭಟ್ಟ
ಡಾ. ಸಚಿನ್ ಭಟ್ಟರವರ ವಿಶೇಷ ಲೇಖನ
(Udupi) ಉಡುಪಿ : ಶಿಕ್ಷಣದ ಕುರಿತ ಚರ್ಚೆಯು ಕೇವಲ ಒಬ್ಬ ಮಂತ್ರಿಯ ರಾಜೀನಾಮೆಯಿಂದ ಮುಕ್ತಾಯಗೊಳ್ಳಬಾರದು. ನಮ್ಮ ಈಗಿನ ಶಿಕ್ಷಣದ ಪರಿಸ್ಥಿತಿ ಇಂದು ನಿನ್ನೆ ಹುಟ್ಟಿಕೊಂಡಿದ್ದಲ್ಲ. ಇದು ದಶಕಗಳ ಕಾಲ ಆಡಳಿಯ ಯಂತ್ರ ಜಡ್ಡುಗಟ್ಟಿರುವುದರ ಫಲವಾಗಿದೆ : ಸಚಿನ್ ಭಟ್ಟರವರ ವಿಶೇಷ ಲೇಖನ.
ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಆದಾಯದ ಸುಮಾರು 15 ರಿಂದ 20% ಭಾಗವನ್ನು ಮಕ್ಕಳ ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತಿವೆ. ಆದರೂ, ನಮ್ಮ ಸರ್ಕಾರಗಳು ತಮ್ಮ ಒಟ್ಟು ಸಾರ್ವಜನಿಕ ವೆಚ್ಚದಲ್ಲಿ ಶೇ. 4 ರಿಂದ 5 ರಷ್ಟನ್ನೂ ಶಿಕ್ಷಣಕ್ಕಾಗಿ ವಿನಿಯೋಗಿಸಲು ಹೆಣಗಾಡುತ್ತಿವೆ.
ಯುಪಿಎ ಅವಧಿಯ ಆರಂಭಕಾಲವಾದ 2004-05 ರಲ್ಲಿ ₹13,098 ಕೋಟಿಯಿದ್ದ ಶಿಕ್ಷಣದ ಬಜೆಟ್ 2013-14 ರ ವೇಳೆಗೆ ₹ 71,059 ಕೋಟಿಗೆ ಏರಿಕೆಯಾಗಿತ್ತು (ವಾರ್ಷಿಕ ಸಂಯೋಜಿತ ಬೆಳವಣಿಗೆ ದರ -21%). 2014-15 – 268, 874 3, 2023-24 – 0 3 5 ₹ 1,23,357 3 ತಲುಪಿದ್ದು, ಬೆಳವಣಿಗೆ ದರವು ಕೇವಲ 7% ಗೆ ಕುಸಿದಿದೆ. ಇದೇ ಅವಧಿಯಲ್ಲಿ ಶಾಲಾ ಶಿಕ್ಷಣದ ಬೆಳವಣಿಗೆಯ ದರವು ಶೇ. 22 ರಿಂದ ಶೇ. 5 ಕ್ಕೆ ಹಾಗೂ ಉನ್ನತ ಶಿಕ್ಷಣದ ಬೆಳವಣಿಗೆಯ ದರವು ಶೇ. 19 ರಿಂದ ಶೇ. 10 ಕ್ಕೆ ಕುಸಿದಿದೆ.
ಕಳೆದ ಹತ್ತು ವರ್ಷಗಳಲ್ಲಿ ದೇಶದ ಕಂದಾಯ ವೆಚ್ಚವು ₹57.95 ಲಕ್ಷ ಕೋಟಿಯಿಂದ ₹155.57 ಲಕ್ಷ ಕೋಟಿಗೆ ಏರಿಕೆಯಾಗಿದೆ. ಶಿಕ್ಷಣಕ್ಕೆ ಮೀಸಲಿಟ್ಟ ಹಣವು ₹4.05 ಲಕ್ಷ ಕೋಟಿಯಿಂದ ₹8.38 ಲಕ್ಷ ಕೋಟಿಗೆ ಹೆಚ್ಚಾಗಿದ್ದರೂ, ಒಟ್ಟು ಕಂದಾಯ ವೆಚ್ಚದಲ್ಲಿ ಶಿಕ್ಷಣದ ಪಾಲು ಶೇ. 6.98 ರಿಂದ ಶೇ. 5.39 ಕ್ಕೆ ಕುಸಿದಿದೆ,
2014ರಲ್ಲಿ 7,885 ಇದ್ದ ಸರ್ಕಾರಿ ಕಾಲೇಜುಗಳ ಸಂಖ್ಯೆ ರಿಂದ 2024 ರಲ್ಲಿ 7,994 ತಲುಪಿದೆ. ಇದರರ್ಥ ಹತ್ತು ವರ್ಷಗಳಲ್ಲಿ ಹೆಚ್ಚಾದ ಸರ್ಕಾರಿ ಕಾಲೇಜುಗಳ ಪ್ರಮಾಣ ಕೇವಲ 1% ನಷ್ಟು ಮಾತ್ರ. ಆದರೆ ಇದೇ ಅವಧಿಯಲ್ಲಿ ಖಾಸಗಿ ಕಾಲೇಜುಗಳು 21,750 ರಿಂದ 32,513ಕ್ಕೇರಿವೆ. ಅಂದರೆ ಖಾಸಗಿ ಕಾಲೇಜುಗಳ ಹತ್ತು ವರ್ಷಗಳ ಬೆಳವಣಿಗೆಯ ದರ 49%. ಸಾರ್ವಜನಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ 21% ನಷ್ಟು ಹೆಚ್ಚಾಗಿದ್ದರೆ (1.34 ಕೋಟಿಯಿಂದ 1.63 ಕೋಟಿ), ಖಾಸಗಿ ಸಂಸ್ಥೆಗಳಲ್ಲಿ ಈ ಪ್ರಮಾಣ 42% ನಷ್ಟು 2 (1.82 3 3.57 3).
2014 ರಿಂದ 2024 ರ ನಡುವೆ ಭಾರತದಲ್ಲಿ 89,441 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಅಂದರೆ ದೇಶದ ಜನಸಂಖ್ಯೆ 12 ಕೋಟಿಗಿಂತಲೂ ಹೆಚ್ಚು ಹೆಚ್ಚಾಗುತ್ತಿದ್ದರೂ, ದಿನಕ್ಕೆ ಸರಾಸರಿ 25 ರಂತೆ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ.
ಈ ಅಂಕಿ ಸಂಖ್ಯೆಗಳನ್ನು ಹೊರತುಪಡಿಸಿ ಇನ್ನೊಂದು ಸಮಸ್ಯೆಯಿದೆ. ಶಾಲಾ ಶಿಕ್ಷಣವು ವ್ಯವಸ್ಥಿತವಾಗಿ ನಾಶಗೊಳಿಸಿ, ಅದರ ಜಾಗವನ್ನು ಪ್ರವೇಶ ಪರೀಕ್ಷೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳು ಕಬಳಿಸಿವೆ.
ಉದಾಹರಣೆಗೆ: ದೆಹಲಿಯ ವಿದ್ಯಾರ್ಥಿಗಳ ಮೇಲೆ ಹೇರಲಾಗಿರುವ ಅತ್ಯಂತ ನಿರುಪಯುಕ್ತ ಪರೀಕ್ಷೆಯೆಂದರೆ ‘ಸಿಯುಇಟಿ’ (CUET). ದೆಹಲಿಯ ಯಾವುದೇ ಕಾಲೇಜಿನಲ್ಲಿ ಸೀಟು ಪಡೆಯಬೇಕಾದರೆ, ಶಾಲಾ ಪರೀಕ್ಷೆಯಲ್ಲಿ ಟಾಪರ್ ಆದ ವಿದ್ಯಾರ್ಥಿಯೂ ಸಹ CUET ಪರೀಕ್ಷೆಗೆ ಹಾಜರಾಗಲೇಬೇಕಾದ ಪರಿಸ್ಥಿತಿ ಇದೆ.
ಪ್ರತಿಯೊಂದು ಪ್ರವೇಶ ಪರೀಕ್ಷೆಯೂ ಸಮಾನತೆಗೆ ವಿರುದ್ಧವಾಗಿದೆ
ಏಕೆಂದರೆ ಯಾರು ಕೋಚಿಂಗ್ ಪಡೆಯಲು ಶಕ್ತರಾಗಿದ್ದಾರೋ ಅಥವಾ ಯಾರಿಗೆ ತರಬೇತಿಯ ಸೌಲಭ್ಯವಿದೆಯೋ ಅವರು ಮಾತ್ರ ಇವುಗಳಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಕೊನೆಯ ಮೊಳೆ ಬಿದ್ದಂತಾಗಿದೆ.
2014 ಮತ್ತು 2026 ರ ನಡುವೆ, ಐಐಟಿ (IIT) ಬೋಧನಾ ಶುಲ್ಕವು 122% ರಷ್ಟು ಹೆಚ್ಚಾಗಿದೆ. ಐಐಎಂ ಅಹಮದಾಬಾದ್‌ನಲ್ಲಿ (IIM Ahmedabad) ಎರಡು ವರ್ಷಗಳ ಕೋರ್ಸ್ ಶುಲ್ಕವು ಸುಮಾರು 66% ರಷ್ಟು ಏರಿಕೆಯಾಗಿದೆ. ಎನ್‌ಐಡಿ (NID) ಮತ್ತು ಎನ್‌ಎಲ್‌ಯು (NLU) ಶುಲ್ಕಗಳು ಸಹ ಎರಡು ರಿಂದ ಮೂರು ಪಟ್ಟು ಗಮನಾರ್ಹವಾಗಿ ಹೆಚ್ಚಾಗಿವೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವಿಜ್ಞಾನಿಗಳನ್ನು ಭಾರತಕ್ಕೆ ಮರಳುವಂತೆ ದೇಶವು ಕೋರುತ್ತಿರುವಾಗ, ನಮ್ಮದೇ ಆದ ಸಂಶೋಧನಾ ಫೆಲೋಶಿಪ್‌ಗಳನ್ನು ರದ್ದುಗೊಳಿಸಲಾಗಿದೆ.
ಕೆವಿಪಿವೈ (KVPY) ಯೋಜನೆಯು ಇನ್‌ಸ್ಪೆರ್ (INSPIRE) ನಂತಹ ಸ್ಕಾಲರ್‌ಶಿಪ್‌ಗಳಿಗೆ ದಾರಿ ಮಾಡಿಕೊಟ್ಟಿತು. ಪ್ರಸ್ತುತ ವರ್ಷದಲ್ಲಿ ಇನ್‌ಸ್ಟೈರ್ ಫೆಲೋಶಿಪ್‌ಗಳಿಗೂ ಸಹ ಯಾವುದೇ ಬಜೆಟ್ ಹಂಚಿಕೆಯಾಗಿಲ್ಲ. ಖಾಸಗಿ ವೈದ್ಯಕೀಯ ಕಾಲೇಜಿಗೆ ಸೇರಬಯಸುವವರಿಗೆ ‘ನೀಟ್’ (NEET) ಪರೀಕ್ಷೆಯು ನಿರುಪಯುಕ್ತವಾಗಿದೆ. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ನಡುವಿನ ಶುಲ್ಕದ ವ್ಯತ್ಯಾಸ (₹5 ಲಕ್ಷ ಮತ್ತು ₹1.5 ಕೋಟಿ) ಎಷ್ಟು ಅಗಾಧವಾಗಿದೆಯೆಂದರೆ, 30,000 ನೇ ರ್ಯಾಂಕ್ ತಲುಪುವಷ್ಟರಲ್ಲಿ ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರವೇಶಾತಿ ಪೂರ್ಣಗೊಳ್ಳುತ್ತದೆ. ಆದರೆ 13 ಲಕ್ಷ ನೇ ರ್ಯಾಂಕ್ ಬಂದಿದ್ದರೂ ಸಹ ಖಾಸಗಿ ಕಾಲೇಜುಗಳಲ್ಲಿ ಸೀಟುಗಳು ಭರ್ತಿಯಾಗದೆ ಖಾಲಿ ಉಳಿಯುತ್ತವೆ. ಖಾಸಗಿ ಕಾಲೇಜುಗಳು ಭಾರತದ ಕೇವಲ ಶೇ. 1 ರಷ್ಟು ಇರುವ ಶ್ರೀಮಂತರಿಗೆ ಮಾತ್ರ ಮೀಸಲಾಗಿವೆ. ಎಲ್ಲಾ ಖಾಸಗಿ ಕಾಲೇಜುಗಳ ವೆಚ್ಚವು ಸಾರ್ವಜನಿಕ ಸಂಸ್ಥೆಗಳಿಗಿಂತ 5 ರಿಂದ 10 ಪಟ್ಟು ಹೆಚ್ಚಾಗಿದೆ. ಇತ್ತೀಚೆಗೆ ಘೋಷಿಸಲಾದ 9,911 ಹೆಚ್ಚುವರಿ ಸೀಟುಗಳಲ್ಲಿ ಕೇವಲ 2,400 ಸೀಟುಗಳು ಮಾತ್ರ ಸಾರ್ವಜನಿಕ ಸಂಸ್ಥೆಗಳಲ್ಲಿದ್ದರೆ, ಶೇಕಡಾ 78 ರಷ್ಟು ಸೀಟುಗಳು ಖಾಸಗಿ ವಲಯದಲ್ಲಿವೆ.
ಆರ್ಥಿಕ ಸಮೀಕ್ಷೆ 2025-26 ರ ಪ್ರಕಾರ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಹುದ್ದೆಗಳಲ್ಲಿ ಶೇಕಡಾ 56.2 ರಷ್ಟು ಖಾಲಿ ಇವೆ. ಶೇಕಡಾ 75 ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಉದ್ಯಮ ರಂಗಕ್ಕೆ ಅಗತ್ಯವಿರುವ ಸಿದ್ಧತೆಯನ್ನು ಹೊಂದಿಲ್ಲ ಮತ್ತು ಸುಮಾರು 2 ಕೋಟಿ ಹದಿಹರೆಯದವರು (14-18 ವರ್ಷಗಳು) ಶಾಲೆಯಿಂದ ಹೊರಗುಳಿದಿದ್ದಾರೆ.
ಪ್ರೌಢ ಶಿಕ್ಷಣದ ಒಟ್ಟು ನೋಂದಣಿ ಪ್ರಮಾಣ ಶೇ. 68.5 ರಷ್ಟಿದ್ದು, ಇದು ರಾಷ್ಟ್ರೀಯ ಶಿಕ್ಷಣ ನೀತಿಯು (NEP) 2030 ರ ವೇಳೆಗೆ ತಲುಪಲು ನಿಗದಿಪಡಿಸಿರುವ ಶೇ. 100 ರ ಗುರಿಗಿಂತ ಅತ್ಯಂತ ಹಿಂದುಳಿದಿದೆ.
ಜೆನ್ ಜೀ ಯುವಜನತೆ ಯಾವುದೇ ಕಾರಣವಿಲ್ಲದೆ ಪ್ರತಿಭಟನೆ ನಡೆಸುತ್ತಿಲ್ಲ. ಹೆಚ್ಚುತ್ತಿರುವ ವೆಚ್ಚಗಳು, ಕುಗ್ಗುತ್ತಿರುವ ಸಾರ್ವಜನಿಕ ಸಾಮರ್ಥ್ಯ, ದುರ್ಬಲ ಸಂಶೋಧನಾ ಬೆಂಬಲ ಮತ್ತು ಅಸಮರ್ಪಕ ಉದ್ಯೋಗಾವಕಾಶಗಳನ್ನು ಅನೇಕ ಯುವ ಭಾರತೀಯರು ಪ್ರತ್ಯಕ್ಷವಾಗಿ ಕಾಣುತ್ತಿದ್ದಾರೆ. ಅವರಿಗೆ ಕೇವಲ ಪತ್ರಿಕೆಗಳ ಹೆಡ್ಡಿಂಗ್, ಟಿವಿಯ ಬ್ರೇಕಿಂಗ್ ನ್ಯೂಸುಗಳ ಬದಲಿಗೆ ನೈಜ ಫಲಿತಾಂಶಗಳು ಬೇಕಾಗಿವೆ.
ಇದಕ್ಕಿರುವ ಪರಿಹಾರಗಳು ಸ್ಪಷ್ಟವಾಗಿವೆ
ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ, ಸಂಶೋಧನೆಗೆ ಧನಸಹಾಯ, ಉತ್ತಮ ಸಾರ್ವಜನಿಕ ಸಂಸ್ಥೆಗಳು, ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿ, ಉದ್ಯಮಕ್ಕೆ ತಕ್ಕಂತೆ ಕೌಶಲ್ಯ ಸುಧಾರಣೆ ಮತ್ತು ಕೋಟ್ಯಂತರ ಗುಣಮಟ್ಟದ ಆಡಳಿತಾತ್ಮಕ ಉದ್ಯೋಗಗಳ ಸೃಷ್ಟಿ.
2024 ರ ಸಮಯವು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ಥಾನದಿಂದ ಪಕ್ಕಕ್ಕೆ ಸರಿದು, ಮುಂದಿನ ಪೀಳಿಗೆಗೆ ಅಧಿಕಾರದ ಚುಕ್ಕಾಣಿ ಹಸ್ತಾಂತರಿಸಲು ಸೂಕ್ತ ಸಮಯವಾಗಿತ್ತು ಎಂದು ಹಲವರು ನಂಬುತ್ತಾರೆ, ಅಧಿಕಾರ ವರ್ಗದಲ್ಲಿರುವ ಅವೇ ಹಳೆಯ ಮುಖಗಳಿಂದ ದೇಶವು ಯುವಜನರಲ್ಲಿ ಬೆಳೆಯುತ್ತಿರುವ ಅಸಮಾಧಾನದತ್ತ ಸಾಗುತ್ತಿರುವಂತೆ ಕಾಣುತ್ತಿದೆ. ಇಂದಿನ ಯುವಕರು ಸರ್ಕಾರಗಳನ್ನು ಕೇವಲ ‘ಚುನಾವಣಾ ಪ್ರಚಾರದ ನಿರ್ವಹಣೆ’ಯಿಂದ ಅಳೆಯದೆ, ಸೃಷ್ಟಿಯಾದ ಅವಕಾಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಿದ್ದಾರೆ.
ರಾಜಕೀಯವಾಗಿ ಯಾರೇ ಸಮ್ಮತಿಸಲಿ ಅಥವಾ ಬಿಡಲಿ, ಒಂದು ಸತ್ಯವಂತೂ ಶಾಶ್ವತ: ಶಿಕ್ಷಣ, ಸಂಶೋಧನೆ ಮತ್ತು ಯುವಜನತೆಯ ಮೇಲೆ ಸರಿಯಾದ ಹೂಡಿಕೆ ಮಾಡದೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿಲ್ಲ.
ಈ ಚರ್ಚೆಯು ಬಹುಕಾಲದಿಂದ ಬಾಕಿ ಉಳಿದಿತ್ತು. ಇದು ಇಲ್ಲಿಗೇ ನಿಲ್ಲಬಾರದು.
ಕೊನೆಯ ಮಾತು
ಭಾರತೀಯರು ಹಲವು ವಿಚಾರಗಳಲ್ಲಿ ನಿರೀಕ್ಷೆಯ ಮಟ್ಟವನ್ನು ಬಹಳ ಕೆಳಗಿಟ್ಟುಕೊಂಡಿದ್ದಾರೆ. ಶುದ್ಧ ಗಾಳಿ ಮತ್ತು ವಾಸಯೋಗ್ಯ ನಗರಗಳಿಗಾಗಿ ನಾವು ನಡೆಸಿದ ಪ್ರತಿಭಟನೆಗಳು ರಾಜಕಾರಣಿಗಳನ್ನು ನಡುಗಿಸಲಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲದಿದ್ದರೆ ನಮಗೆ ಬೇಜಾರಿಲ್ಲ. ನಾವು ನಮ್ಮ ಬೈಕು ಕಾರುಗಳನ್ನು ಬಳಸುತ್ತೇವೆ. ಕರೆಂಟ್ ಹೋದರೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ, ಇನ್ವರ್ಟರ್ ಖರೀದಿಸುತ್ತೇವೆ. ನೀರು ಕುಡಿಯಲು ಯೋಗ್ಯವಿಲ್ಲದಿದ್ದರೆ ಪರವಾಗಿಲ್ಲ. ಮನೆಗೆ RO ಹಾಕಿಸುತ್ತೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲದಿದ್ದರೆ ತೊಂದರೆಯಿಲ್ಲ. ಹೆಚ್ಚು ದುಡ್ಡು ಕೊಟ್ಟಾದರೂ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಆದರೆ, ಭಾರತೀಯರು ತಮ್ಮ ಮಕ್ಕಳ ವಿಷಯದಲ್ಲಿ ಅತ್ಯಂತ ತೀವ್ರವಾದ ಗಂಭೀರತೆಯನ್ನು ಹೊಂದಿದ್ದಾರೆ. ಅವರಿಗೆ ವರ್ತಮಾನ ಎಂಬುದು ಕೇವಲ ತಾತ್ಕಾಲಿಕ ತಂಗುದಾಣವಷ್ಟೇ;
“ಭವಿಷ್ಯ” ಎಂಬ ಜಾಗದಲ್ಲಿ ತಮ್ಮ ಮಕ್ಕಳು ಮಿಂಚಬೇಕು ಅಂಬುದು ಅವರ ಗುರಿ. ಆ ಭವಿಷ್ಯಕ್ಕೆ ಎದುರಾಗುವ ಯಾವುದೇ ಬೆದರಿಕೆಯೂ ಅವರಿಗೆ ಅತ್ಯಂತ ಗಂಭೀರವಾದದ್ದು, ಅವರು ತಮ್ಮ ಮಕ್ಕಳನ್ನು ಕಲುಷಿತ ಗಾಳಿಯಲ್ಲೇ ಬೆಳೆಸಬಹುದು. ತುಂಬಿದ ರೈಲುಗಳಲ್ಲಿ ನೇತಾಡಲು ಬಿಡಬಹುದು ಮತ್ತು ಅಪಾಯಕಾರಿ ರಸ್ತೆಗಳಲ್ಲಿ ಪ್ರಯಾಣಿಸಲು ಬಿಡಬಹುದು. ಆದರೆ ‘ಅನಿಶ್ಚಿತ ಭವಿಷ್ಯ’ ಎಂಬ ಆ ಭಯಾನಕ ವಿಷಯವನ್ನು ಮಾತ್ರ ಅವರು ಎಂದಿಗೂ ಸಹಿಸುವುದಿಲ್ಲ. ಅಂತಹ ಅನಿಶ್ಚಿತ ಭವಿಷ್ಯಕ್ಕೆ ಈಗಿನ ಸರ್ಕಾರ ಒಂದು ಸಂಕೇತವಾಗಿ ಮಾರ್ಪಟ್ಟಿದೆ.
ಡಾ. ಸಚಿನ್ ಭಟ್ಟ,

