ಹೆಜಮಾಡಿಯ ಕರಾವಳಿ ಯುವಕ -ಯುವತಿ ವೃಂದದಿಂದ ಸ್ವಾತಂತ್ರ್ಯ ದಿನಾಚರಣೆ, ಬೀಚ್ ಸ್ವಚ್ಛತೆ
ಧ್ವಜಾರೋಹಣ ನೆರವೇರಿಸಿದ ಬೆಂಗಳೂರಿನ ಉದ್ಯಮಿ ಚೆನ್ನಕೇಶವ ಎನ್ ಮೆಂಡನ್
(Hejamadi) ಹೆಜಮಾಡಿ: ರಾಜ್ಯ, ಜಿಲ್ಲಾ ಸಾಂಘಿಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ವಿಜೇತ “ಕರಾವಳಿ ಯುವಕ -ಯುವತಿ ವೃಂದ (ರಿ)” ಹೆಜಮಾಡಿಯ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ, ಬೃಹತ್ ಬೀಚ್ ಸ್ವಚ್ಛತಾ ಆಂದೋಲನ ಹಾಗೂ ಸಾರ್ವಜನಿಕ ಶೌಚಾಲಯ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಧ್ವಜಾರೋಹಣವನ್ನು ಬೆಂಗಳೂರಿನ ಉದ್ಯಮಿ ಚೆನ್ನಕೇಶವ ಎನ್ ಮೆಂಡನ್ ನೆರವೇರಿಸಿದರು.
ಅತಿಥಿಗಳಾಗಿ ಉದ್ಯಮಿಗಳಾದ ಹೇಮಾನಂದ ಕೆ ಪುತ್ರನ್ ಹಾಗೂ ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘ ನಿ ಹೆಜಮಾಡಿಯ ಅಧ್ಯಕ್ಷರಾದ ಶಿವರಾಮ ಎನ್ ಶೆಟ್ಟಿ ಮಟ್ಟಿಮನೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಕುಮಾರಿ ಶ್ರೇಯಾ (17)ರವರ ವೈದ್ಯಕೀಯ ಚಿಕಿತ್ಸೆಗಾಗಿ ಕರಾವಳಿ ಸಹಾಯ ಹಸ್ತ ಯೋಜನೆಯ ಮೂಲಕ ₹50,000 ರೂಪಾಯಿಗಳ ಸಹಾಯ ಧನವನ್ನು ಚೆಕ್ ಮೂಲಕ ನೀಡಲಾಯಿತು.
ನಂತರ ಹೆಜಮಾಡಿ ಕಡಲ ಕಿನಾರೆ ಮತ್ತು ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಯುವಕ ವೃಂದದ ಅಧ್ಯಕ್ಷ ಎಸ್ ದಿವಾಕರ ಹೆಜ್ಮಾಡಿ, ಗೌರವಾಧ್ಯಕ್ಷ ಅಶೋಕ್ ವಿ.ಕೆ, ಯುವತಿ ವೃಂದದ ಅಧ್ಯಕ್ಷೆ ಶ್ರೀಮತಿ ರೂಪಾ ಹೇಮಾನಂದ್ ಪುತ್ರನ್, ಗೌರವಾಧ್ಯಕ್ಷರುಗಳಾದ ಶ್ರೀಮತಿ ಗೀತಾ ತಾರಾನಾಥ್, ಶ್ರೀಮತಿ ಪವಿತ್ರಾ ಗಿರೀಶ್ ಹಾಗೂ ಕರಾವಳಿ ಯುವಕ -ಯುವತಿ ವೃಂದದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವೃಂದದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸ್ವಾಗತಿಸಿದರು. ಕೋಶಾಧಿಕಾರಿ ಶ್ರೇಯಶ್ ಸಾಲ್ಯಾನ್ ನಿರೂಪಿಸಿದರು, ಸಾಂಸ್ಕೃತಿಕ ಕಾರ್ಯದರ್ಶಿ ಅದಿತ್ ಕೋಟ್ಯಾನ್ ವಂದಿಸಿದರು.

