ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಶಿಕ್ಷಣ ಕ್ಷೇತ್ರದಲ್ಲಿ ಡಾ. ರಾಧಾಕೃಷ್ಣನ್ ಅವರ ಕೊಡುಗೆ ಸ್ಮರಿಸಿ ಪುಷ್ಪ ನಮನ ಸಲ್ಲಿಸಿದ ಆಡಳಿತ ಮಂಡಳಿ
(Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಸರ್ವೇಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶಿಕ್ಷಣ ಕ್ಷೇತ್ರಕ್ಕೆ ಡಾ. ರಾಧಾಕೃಷ್ಣನ್ ಅವರ ಕೊಡುಗೆಯನ್ನು ಸ್ಮರಿಸಿ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಜಿ ಕುಲಸಚಿವರು ಹಾಗೂ ಎನ್ಐಟಿಕೆ ಸುರತ್ಕಲ್ನ ಮಾಜಿ ನಿರ್ದೇಶಕರಾದ ಡಾ. ಎಚ್ ವಿ ಸುಧಾಕರ್ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅವರು ಮಾತನಾಡಿ, ವಿದ್ಯಾರ್ಥಿಗಳ ಮೇಲೆ ದೀರ್ಘಕಾಲದ ಸಕಾರಾತ್ಮಕ ಪ್ರಭಾವ ಬೀರುವುದು ಶಿಕ್ಷಕರ ನಿಜವಾದ ಸಾಧನೆಯಾಗಿದೆ. ಶಿಕ್ಷಕರು ಕರುಣೆ, ಸಹಾನುಭೂತಿ ಮತ್ತು ಉತ್ತಮ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಶ್ರೀ ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಧಾಕೃಷ್ಣ ಎಸ್. ಐತಾಳ್ ಅವರು ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿವರಿಸಿದರು.
ಪ್ರಾಂಶುಪಾಲರಾದ ಡಾ. ನಾಗರಾಜ ಭಟ್ ಅವರು ಸ್ವಾಗತಿಸಿ, ವಿದ್ಯಾರ್ಥಿಗಳು ಹಾಗೂ ಸಮಾಜದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಮಹತ್ವದ ಪಾತ್ರದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಡೀನ್ಗಳು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

