ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ₹4.69 ಕೋಟಿ ನಿವ್ವಳ ಲಾಭ
ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ಘೋಷಣೆ; ₹218.55 ಕೋಟಿ ಠೇವಣಿ, ₹174.82 ಕೋಟಿ ಸಾಲ
(Kundapura) ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 2025–26ನೇ ಸಾಲಿನ 35ನೇ ವಾರ್ಷಿಕ ಸಾಮಾನ್ಯ ಸಭೆಯು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್‌ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜೋನ್ಸನ್ ಡಿ’ಅಲ್ಮೇಡಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸುಮಾರು 2,500 ಮಂದಿ ಸದಸ್ಯರು ಭಾಗವಹಿಸಿದ್ದು, ಗಣನೀಯ ಸಂಖ್ಯೆಯಲ್ಲಿ ಸದಸ್ಯರ ಉಪಸ್ಥಿತಿಯಿಂದ ಸಭೆ ಗಮನ ಸೆಳೆಯಿತು.
2026ರ ಮಾರ್ಚ್ 31ರ ಅಂತ್ಯಕ್ಕೆ ಸಂಘದ ಒಟ್ಟು ಠೇವಣಿ ₹218.55 ಕೋಟಿ ಹಾಗೂ ಸಾಲದ ಹೊರಬಾಕಿ ₹174.82 ಕೋಟಿ ದಾಖಲಾಗಿದೆ.
ವರದಿ ಸಾಲಿನಲ್ಲಿ ಸಂಘವು ₹4.69 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಉತ್ತಮ ಆರ್ಥಿಕ ಸಾಧನೆಯನ್ನು ಪರಿಗಣಿಸಿ ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರಾದ ಶ್ರೀ ಜೋನ್ಸನ್ ಡಿ’ಅಲ್ಮೇಡಾ ಅವರು ಸಭೆಯಲ್ಲಿ ಘೋಷಿಸಿದರು.
ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ, ಉತ್ತಮ ಅಂಕಗಳನ್ನು ಗಳಿಸಿದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ವಿದ್ಯಾರ್ಥಿ ವೇತನವನ್ನು ಮಹಾಸಭೆಯ ಸಂದರ್ಭದಲ್ಲಿ ವಿತರಿಸಲಾಯಿತು.
ವಿದ್ಯಾರ್ಥಿವೇತನವನ್ನು ಫಾ. ಪಾವ್ಲ್ ರೇಗೋ ಅವರು ವಿತರಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆಯನ್ನು ಉತ್ತೇಜಿಸುವ ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘವು ಕೈಗೊಂಡಿರುವ ಈ ಉಪಕ್ರಮವು ಮೆಚ್ಚುಗೆಗೆ ಪಾತ್ರವಾಯಿತು.
ಇದೇ ಸಂದರ್ಭದಲ್ಲಿ ಬಸ್ರೂರಿನ ಪಿಯೂಸ್ ಡಿಸೋಜಾ ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಿರುವ ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವುದು ಹಾಗೂ ಸದಸ್ಯರು ಮತ್ತು ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಯೋಜನೆಗಳನ್ನು ಆಡಳಿತ ಮಂಡಳಿ ಹೊಂದಿದೆ. ಸಂಘವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಢವಾಗಿ ಬೆಳೆಸುವ ಉದ್ದೇಶದೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಸಂಘದ ನಿರಂತರ ಪ್ರಗತಿಗೆ ಆಡಳಿತ ಮಂಡಳಿಯ ಸಮರ್ಥ ಮಾರ್ಗದರ್ಶನ, ಸಿಬ್ಬಂದಿಯ ಕಾರ್ಯತತ್ಪರತೆ ಹಾಗೂ ಸದಸ್ಯರು ಮತ್ತು ಗ್ರಾಹಕರು ಸಂಘದ ಮೇಲಿಟ್ಟಿರುವ ವಿಶ್ವಾಸ ಮತ್ತು ನೀಡುತ್ತಿರುವ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಸಂಘದ ಮುಖ್ಯ ಸಲಹೆಗಾರರಾದ ವಂದನೀಯ ಫಾ. ಪಾವ್ಲ್ ರೇಗೋ ಅವರು ಉಪಸ್ಥಿತರಿದ್ದು, ಆಡಳಿತ ಮಂಡಳಿ ಹಾಗೂ ಸದಸ್ಯರಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮೇಬಲ್ ಡಿ’ಆಲ್ಮೇಡಾ, ಸಂಘದ ನಿರ್ದೇಶಕರಾದ ವಿನೋದ್ ಕ್ರಾಸ್ಟೋ, ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ವಿಲ್ಸನ್ ಡಿಸೋಜಾ, ಡೆರಿಕ್ ಡಿಸೋಜಾ, ವೆಲೆಂಟೈನ್ ಡಿಸೋಜಾ, ಮೈಕಲ್ ಪಿಂಟೋ, ಸಂತೋಷ್ ಓಜ್ವಾಲ್ಡ್ ಡಿ’ಸಿಲ್ವಾ, ಟೆರೆನ್ಸ್ ಸುವಾರಿಸ್, ರೋವನ್ ಡಿ’ಕೋಸ್ಟಾ, ಲಿಪ್ಟನ್ ಒಲಿವೇರ, ಶ್ರೀಮತಿ ಶಾಂತಿ ಡಾಯಾಸ್ ಹಾಗೂ ಶ್ರೀಮತಿ ಶಾಂತಿ ಆರ್. ಕರ್ವಾಲ್ಹೊ ಉಪಸ್ಥಿತರಿದ್ದರು.
ನಿರ್ದೇಶಕ ಫಿಲಿಪ್ ಡಿ’ಕೋಸ್ಟಾರವರು ಸ್ವಾಗತಿಸಿದರು. ಶ್ರೀಮತಿ ಡೈನಾ ಡಿ’ಅಲ್ಮೇಡಾರವರು ನಿರೂಪಿಸಿದರು. ಕಿರಣ್ ಲೋಬೋ ವಂದನಾರ್ಪಣೆ ಸಲ್ಲಿಸಿದರು.

