ನೇಪಾಳದ ಕಠ್ಮಂಡುವಿನಲ್ಲಿ ಭಾರತ–ನೇಪಾಳ ತುಳುವ ಮಹಾಸಭೆ – 2026 ಯಶಸ್ವಿ
ತುಳು : ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಕೇಂದ್ರದ ಕ್ರಮ ಅಗತ್ಯ ರಾವಲ್ ಗಣೇಶ್ ಭಟ್
(Nepala, Katmandu) ನೇಪಾಳ, ಕಠ್ಮಂಡು, : ಪ್ರಾಚೀನ ಸನಾತನ ಸಂಸ್ಕಾರ ಮತ್ತು ಪರಂಪರೆಯ ಮೂಲಗಳನ್ನು ಹೊಂದಿರುವ ತುಳು ಭಾಷೆಯನ್ನು ಭಾರತ ಸರ್ಕಾರವು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಿ ಗೌರವಿಸಬೇಕು. ವಿಶ್ವದಾದ್ಯಂತ ನೆಲೆಸಿರುವ ತುಳುವರ ಭಾವೈಕ್ಯತೆಯನ್ನು ಬೆಳೆಸುವ ಮೂಲಕ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಲಪಡಿಸಬೇಕು ಎಂದು ಶ್ರೀ ಪಶುಪತಿನಾಥ ದೇವಸ್ಥಾನದ ಮುಖ್ಯ ಅರ್ಚಕರಾದ ರಾವಲ್ ಶ್ರೀ ಗಣೇಶ್ ಭಟ್ ಅವರು ಹೇಳಿದ್ದಾರೆ.
ನೇಪಾಳದ ಕಠ್ಮಂಡುವಿನಲ್ಲಿ ಕಳೆದ ಬುಧವಾರ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ನೇಪಾಳ ಘಟಕದ ಸಾರಥ್ಯದಲ್ಲಿ ನಡೆದ ಭಾರತ–ನೇಪಾಳ ತುಳುವ ಮಹಾಸಭೆ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳುವ ಚಳವಳಿಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸುವ ಉದ್ದೇಶ: ಡಾ. ರಾಜೇಶ್ ಕೃಷ್ಣ ಆಳ್ವ
ತುಳುವ ಮಹಾಸಭೆ ಅಂತರಾಷ್ಟ್ರೀಯ ಕೇಂದ್ರೀಯ ಕಾರ್ಯಾಧ್ಯಕ್ಷ ಡಾ. ರಾಜೇಶ್ ಕೃಷ್ಣ ಆಳ್ವ ಮಾತನಾಡಿ, ತುಳುವ ಮಹಾಸಭೆಯ ಚಳವಳಿಯು ಶತಮಾನದ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಮಹಾಸಭೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಮಹತ್ವದ ಹೆಜ್ಜೆಯಾಗಿ ಭಾರತ–ನೇಪಾಳ ತುಳುವ ಮಹಾಸಭೆ ರೂಪುಗೊಂಡಿದೆ ಎಂದು ಹೇಳಿದರು.
ಇದು ತುಳುವ ಮಹಾಸಭೆಯ ಅಂತರರಾಷ್ಟ್ರೀಯ ಮಟ್ಟದ ಪ್ರಥಮ ಕಾರ್ಯಕ್ರಮವಾಗಿದ್ದು, “ಗಡಿ ದಾಟಿದ ತುಳುವರ ವೈಭವ”ಎಂಬ ಆಶಯದೊಂದಿಗೆ ಜಗತ್ತಿನಾದ್ಯಂತ ನೆಲೆಸಿರುವ ತುಳುವರನ್ನು ಒಂದೇ ವೇದಿಕೆಗೆ ತರುವುದು ಹಾಗೂ ತುಳುವರ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಾರತ–ನೇಪಾಳ ಸಾಂಸ್ಕೃತಿಕ ಸಂಬಂಧಕ್ಕೆ ತುಳುವ ಕರ್ನಾಟಕದ ಕೊಡುಗೆ ಅಪಾರ: ಡಾ. ಭರತ್ ಜಂಗಮ್
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೇಪಾಳದ ಕರ್ನಾಟಕ ಮೂಲದ ನ್ಯಾಯವಾದಿ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಡಾ. ಭರತ್ ಜಂಗಮ್ ಅವರು ಮಾತನಾಡಿ, ಭಾರತ ಮತ್ತು ನೇಪಾಳದ ಸನಾತನ ಸಂಸ್ಕೃತಿಗೆ ತುಳುವ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದರು.
ತುಳುನಾಡ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ
ಕಾರ್ಯಕ್ರಮವು ತುಳುನಾಡ ಗೀತೆಯ ಸಮೂಹ ಗಾಯನದೊಂದಿಗೆ ಆರಂಭವಾಯಿತು. 125 ವರ್ಷಗಳ ಪರಂಪರೆಯನ್ನು ಹೊಂದಿರುವ ತುಳುನಾಡ ಗೀತೆಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು. ತುಳುವರ ಭಾಷಾಭಿಮಾನ, ಸಾಂಸ್ಕೃತಿಕ ಅಸ್ಮಿತೆ ಮತ್ತು ಏಕತೆಯನ್ನು ಪ್ರತಿಬಿಂಬಿಸಿದ ಈ ಗಾಯನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ತುಳುವರ್ಲ್ಡ್ ಫೌಂಡೇಶನ್ನ ಅಧ್ಯಅಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು ಅಧ್ಯಕ್ಷತೆ ವಹಿಸಿದ್ದರು.
ವಿಚಾರ ಸಂಕಿರಣ ಮತ್ತು ಪ್ರಬಂಧ ಮಂಡನೆ
ವಿಚಾರ ಸಂಕಿರಣದಲ್ಲಿ ವೆಂಕಟರಮಣ ಡಿ. ಶೆಣೈಯವರು “ಕೊಂಕಣ ಮತ್ತು ತುಳುನಾಡು”, ಶ್ರೀ ಪ್ರಮೋದ್ ಸಪ್ರೆಯವರು “ತುಳುವರಿಗೆ ಮಂದಾರ ರಾಮಾಯಣದ ಮಹತ್ವ” ಹಾಗೂ ಅರವಿಂದ ಬೆಳ್ಚಡರವರು “ತುಳುವೇಶ್ವರ ದೇವಸ್ಥಾನದ ಇತಿಹಾಸ”ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.
ದೇವಸ್ಥಾನದ ಅರ್ಚಕರಿಗೆ ಗೌರವ
ಕಾರ್ಯಕ್ರಮದಲ್ಲಿ ಶ್ರೀ ಪಶುಪತಿನಾಥ ದೇವಸ್ಥಾನದ ಅರ್ಚಕರಾದ ಶಿರಸಿಯ ಗಿರೀಶ ಭಟ್ಟ, ಬಾರ್ಕೂರು–ಬ್ರಹ್ಮಾವರದ ವಿನಯ ಅಡಿಗ ಹಾಗೂ ನೇಪಾಳದ ಶ್ರೀ ವಾಸುಕಿ ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಭಟ್ಟ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಹಾಮಂಡಲದ ಸಂಸ್ಥಾಪಕರಾದ ಚಂದ್ರಶೇಖರ ವಿ. ಶೆಟ್ಟಿ ಉಪಸ್ಥಿತರಿದ್ದರು.
ನಿನ್ನಿಕಲ್ಲು ಪಾದೆ ಅಭಿವೃದ್ಧಿ ಸಮಿತಿಯ ಪ್ರಧಾನ ಸಂಚಾಲಕ, ತುಳುವ ಮಹಾಸಭೆಯ ಪ್ರಮುಖರಾದ ವಿಜಿತ್ ಶೆಟ್ಟಿ, ತುಳುನಾಡು ವಾರ್ತೆಯ ಸಂಪಾದಕ ಪುನೀತ್ ಮುಂಡ್ಕೂರು, ಮುಂಬಯಿ ಉದ್ಯಮಿ ಅರುಣ್ ಸನಿಲ್, ತುಳುನಾಡ ಸಮಾಜ, ಮೀರಾ–ಭಾಯಂದರ್ ಇದರ ಕಾರ್ಯದರ್ಶಿ ಶ್ರೀಮತಿ ಶೋಭಾ ಉಡುಪ, ಭಾಗವಹಿಸಿದ್ದರು.
ಜಯಪ್ರಕಾಶ್ ಪೂಜಾರಿ ಸ್ವಾಗತಿಸಿದರು. ವಿನಯ ಮುಲ್ಕಿ ವಂದಿಸಿದರು. ರಚಿತಾ ಮುಲ್ಕಿ, ರೇಖಾ ಪೂಜಾರಿ ಮೀರಾರೋಡ್, ಶ್ರೀಮತಿ ಕೋಟ್ಯಾನ್, ಉತ್ತಮ್ ಸಿಂಗ್ ಸೇರಿದಂತೆ ಹಲವರು ಸಹಕರಿಸಿದರು.
ವಿವಿಧ ಜನಪದ ಸಾಂಸ್ಕೃತಿಕ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

