ಕಾಪು ತಾಲೂಕು ಮಟ್ಟದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ
ಸಮಾರಂಭದಲ್ಲಿ ಸಂದೇಶ ನೀಡಿದ ಕಾಪು ತಾಲೂಕು ತಹಶೀಲ್ದಾರ್ ಅನಂತಶಂಕರ ಬಿ
(Kaup) ಕಾಪು: ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪು ತಾಲೂಕು ಮಟ್ಟದ 71ನೇ ಕನ್ನಡ ರಾಜ್ಯೋತ್ಸವನ್ನು ಕಾಪು ತಾಲೂಕು ಪ್ರಜಾ ಸೌಧ ಆವರಣದಲ್ಲಿ ಭಾನುವಾರ ಆಚರಿಸಲಾಯಿತು.
ಕಾಪು ತಹಶೀಲ್ದಾರ್, ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಅನಂತಶಂಕರ ಬಿ. ಯವರು ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆಗೈದು, ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು.
ಬಳಿಕ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದ ಅವರು, ನಮ್ಮ ಕರ್ನಾಟಕವು ಅತ್ಯಂತ ಶ್ರೀಮಂತ ಪರಂಪರೆ ಹೊಂದಿದ ರಾಜ್ಯ. ವೀರರೂ, ಜ್ಞಾನಿಗಳೂ, ಆಡಳಿತ ಕುಶಲರೂ, ಪಂಡಿತ ಪಾಮರರು, ಕಲಾವಿದರಾದಿಯಾಗಿ ಹುಟ್ಟಿಬೆಳೆದು ಬೆಳಗಿದ ಧೀಮಂತ ಕನ್ನಡನಾಡು. ಈ ನೆಲದ ಜಲ, ಭಾಷೆ, ನಾಡು- ನುಡಿ, ಸಂಸ್ಕೃತಿಗಳನ್ನು ಕಾಪಾಡಿಕೊಂಡು ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಬಿರೋಣ. ಎಲ್ಲಾ ರಂಗದಲ್ಲೂ ಕನ್ನಡಿಗರು ಮೊದಲಿಗರಾಗೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಹಿಸಿದ್ದರು.
ಅವರು ಮಾತನಾಡಿ, ಹಿರಿಯರು ಜತನದಿಂದ ಮಾಡಿಕೊಟ್ಟ ಈ ನಾಡನ್ನು ಉಳಿಸುವಲ್ಲಿ, ಬೆಳೆಸುವಲ್ಲಿ ನಾವೆಲ್ಲಾ ಮುಂದಡಿ ಇಡೋಣ ಎಂದು ಕನ್ನಡ ರಾಜ್ಯೋತ್ಸವದ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಪು ತಾಲೂಕಿನಲ್ಲಿ 2025-26ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125 ಅಂಕಗಳ ಸಾಧನೆಗೈದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
32 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಗ್ರಾಮ ಸಹಾಯಕ ಸ್ಟ್ಯಾನಿ ಡಿಸೋಜ ಬೆಳ್ಳೆ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ದಂಡತೀರ್ಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ. ನೀಲಾನಂದ ನಾಯ್ಕ್ ರವರು ಪ್ರಧಾನ ಭಾಷಣಗೈದರು.
ಈ ಸಂದರ್ಭ ಕಾಪು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಶಿಕ್ಷಣ ಸಂಯೋಜಕಿ ಅಶ್ವಿನಿ ವೇದಿಕೆಯಲ್ಲಿದ್ದರು.
ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಶಿವಣ್ಣ ಬಾಯಾರ್ ನಿರೂಪಿಸಿದರು. ಪುರಸಭಾ ಮುಖ್ಯಾಧಿಕಾರಿ ಎನ್ ಎಮ್ ಮೇಸ್ತ ವಂದಿಸಿದರು.
ಕಾಪು ತಾಲೂಕಿನ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

