ಕಾಪು : ಪದ್ಮಶಾಲಿ ಸಂಸ್ಥಾಪಕರ ಸಂಸ್ಮರಣೆ , ‘ವಿದ್ಯಾಸೇತು‘ ಆಪ್ ಬಿಡುಗಡೆ, ವಿದ್ಯಾರ್ಥಿ ವೇತನ ವಿತರಣೆ
ಕಾರ್ಯಕ್ರಮ ಉದ್ಘಾಟಿಸಿದ ಪದ್ಮಶಾಲಿ ಸಂಸ್ಥೆಯ ಮುಂಬೈ ಅಧ್ಯಕ್ಷ ಕೃಷ್ಣಾನಂದ ಎಂ ಶೆಟ್ಟಿಗಾರ್
(Kaup) ಕಾಪು : ಕಾಪು ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಸಂಸ್ಥಾಪಕರ ಸಂಸ್ಕರಣೆಯ ಕಾರ್ಯಕ್ರಮ ಹಾಗೂ ವಿದ್ಯಾವರ್ಧಕ ಸಂಘದ ವಿನೂತನ ಉಪಕ್ರಮವಾದ ”ವಿದ್ಯಾಸೇತು”ಆಪ್ ಬಿಡುಗಡೆ ನಡೆಯಿತು.
ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬೈಯ ಅಧ್ಯಕ್ಷ ಕೃಷ್ಣಾನಂದ ಎಂ ಶೆಟ್ಟಿಗಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಮಾತನಾಡಿ, ರಾಹೆ 66 ಕಟಪಾಡಿಯಲ್ಲಿ ತಾನು ಸಮಾಜ ಭವನವನ್ನು ನಿರ್ಮಾಣ ಮಾಡುತ್ತಿದ್ದು, ಅದರಿಂದ ಬರುವ ಆದಾಯವನ್ನು ಪದ್ಮಶಾಲಿ ಸಮಾಜ ಸೇವಾ ಕಾರ್ಯಗಳಿಗೆ ಉಪಯೋಗಿಸುವುದಾಗಿ ನುಡಿದರು.
ಸಮಾಜದ ವಿದ್ಯಾರ್ಥಿಗಳಿಗೆ ದೊಡ್ಡ ಮೊತ್ತದ ವಿದ್ಯಾರ್ಥಿವೇತನ ನೀಡುವುದಕ್ಕೆ ಈ ಆದಾಯವನ್ನು ದೇಣಿಗೆಯಾಗಿ ನೀಡುವ ಆಶ್ವಾಸನೆ ನೀಡಿದರು.
ಮುಖ್ಯ ಅತಿಥಿಯಾಗಿ ಡೈನಾಟಿಕ್ ಟೂಲ್ಸ್ ಅಂಡ್ ಡಿವೈಸಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಬಿ ದಾಮೋದರರವರು ವಿದ್ಯಾವರ್ಧಕ ಸಂಘದ ವಿದ್ಯಾಸೇತು ಆಪ್ ಬಿಡುಗಡೆಗೊಳಿಸಿ ಮಾತನಾಡುತ್ತ, ಸಮಾಜದ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಶುಭ ಹಾರೈಸಿದರು.
ಅತಿಥಿ ಗಿರೀಶ ಶೆಟ್ಟಿಗಾರ್ ರವರು ಮಾತನಾಡಿ, ಸಮಾಜ ಸಂಸ್ಥೆಯನ್ನು ಸ್ಥಾಪಿಸಿದ ಪೂರ್ವಸೂರಿಗಳನ್ನು ನೆನಪಿಸಿಕೊಂಡು ಶ್ರದ್ಧೆಯ ನಮನಗಳನ್ನು ಸಲ್ಲಿಸುವುದು ಉಪಕೃತರಾದ ಸಮಾಜಬಂಧುಗಳ ಕರ್ತವ್ಯವೆಂದರು.
ಸುಂದರ ಎಸ್ ಶೆಟ್ಟಿಗಾರ್ ಎಕ್ಕಾರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ವಿದ್ಯಾವರ್ಧಕ ಸಂಘದ ವಿದ್ಯಾರ್ಥಿಗಳ ಪರವಾದ ಕಾರ್ಯಕ್ರಮಗಳು ಉತ್ತಮ ಫಲಿತಾಂಶ ನೀಡಲೆಂದು ಹಾರೈಸಿದರು.
ಪದ್ಮಶಾಲಿ ಮಹಾಸಭಾ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಮಾತನಾಡಿ, ಸಮಾಜದ ಸಂಸ್ಥಾಪಕರನ್ನು ಸ್ಮರಿಸುವುದು ಹಿಂದೂ ಪರಂಪರೆಯಲ್ಲಿ ವಿಧಿಸಿದ ಋಣತ್ರಯಗಳ ಸಂದಾಯವಾಗುವುದೆಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಕಟೀಲ್, ವಿದ್ಯಾಧರ ಕಾರ್ಕಳ, ರಘುವೀರ ಶೆಟ್ಟಿಗಾರ್ ಪರ್ಕಳ ಮತ್ತು ಡಾ. ಶಿವಪ್ರಸಾದ್ ಕೆ ವಿಷಯಾಧಾರಿತ ಸಂವಾದದಿಂದ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವಿಠಲ ಶೆಟ್ಟಿಗಾರರವರು ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆದು ಯಶಸ್ಸನ್ನು ಕಾಣಬೇಕೆಂದು ಉಪದೇಶಿಸಿದರು.
ಡಾ. ಜಯರಾಮ ಶೆಟ್ಟಿಗಾರ್ ಬಾರ್ಕೂರುರವರು ವಿದ್ಯಾಸೇತು ಆಪ್ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರು ಜನ ಸಂಸ್ಥಾಪಕರ ಪರವಾಗಿ ಉತ್ತರಾಧಿಕಾರಿಗಳನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಎಸ್ ಹೊನ್ನಯ್ಯ ಶೆಟ್ಟಿಗಾರ್ ಸುರತ್ಕಲ್ ಹಾಗೂ ಅಶೋಕ ಶೆಟ್ಟಿಗಾರ್ ಕಾಪು ಉಪಸ್ಥಿತರಿದ್ದರು.
ರತ್ನಾಕರ ಇಂದ್ರಾಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ವೆಂಕಟ್ರಾಯ ಶೆಟ್ಟಿಗಾರ್ ವಂದನಾರ್ಪಣೆಗೈದರು.

