ವೃದ್ಧಾಶ್ರಮ ಹೆಚ್ಚಾಗುವುದು ಒಳ್ಳೆಯ ಲಕ್ಷಣವಲ್ಲ: ವಿಶ್ವನಾಥ ಶೆಣೈ ಅಭಿಮತ
ಚೈತನ್ಯ ರಂಗ ಆಶ್ರಮ ಸೇವಾ ಕಾರ್ಯಕ್ರಮ ಉದ್ಘಾಟಿಸಿದ ಶೆಣೈ
(Udupi) ಉಡುಪಿ: ವೃದ್ಧಾಶ್ರಮಗಳು ಹೆಚ್ಚಾಗುವುದು ಆರೋಗ್ಯಯುತ ಸಮಾಜದ ಒಳ್ಳೆಯ ಲಕ್ಷಣ ಅಲ್ಲ ಎಂದು ಸಮಾಜ ಸೇವಕ ವಿಶ್ವನಾಥ ಶೆಣೈ ಅಭಿಪ್ರಾಯಪಟ್ಟರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಪ್ರಯುಕ್ತ ಕೊಳಲಗಿರಿಯ ಸ್ವರ್ಗ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ರಂಗ ಆಶ್ರಮ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಚಿಕ್ಕವವರು ಇರುವಾಗ ಹೆತ್ತವರು ಪಾಲನೆ ಮಾಡುತ್ತಾರೆ. ಅದೇ ಮಕ್ಕಳು ದೊಡ್ಡವರಾದಾಗ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ ಎಂದಾದರೆ, ಅದು ನಮ್ಮ ಸಂಸ್ಕೃತಿಯಾಗುವುದಿಲ್ಲ. ಇನ್ನು ಕೆಲವು ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದರಿಂದ ಅವರು ವಿದೇಶಗಳಿಗೆ ಹೋಗಿ ಅಲ್ಲಿ ವಾಸಿಸತೊಡಗುತ್ತಿದ್ದಾರೆ. ಇದರಿಂದ ಹೆತ್ತವರು ಆಶ್ರಮ ಸೇರುವಂತಾಗಿದೆ. ಏನಿದ್ದರೂ ಹಿರಿಯರನ್ನು ಮನೆಯಲ್ಲಿಯೇ ನೋಡಿಕೊಳ್ಳುವ ಕೆಲಸ ಆಗಬೇಕು ಎಂದು ಆಶೀಸಿದರು.
ಸ್ವರ್ಗ ಆಶ್ರಮದ ಪ್ರವರ್ತಕರೂ ಆಗಿರುವ ಹೋಂ ಡಾಕ್ಟರ್ ಫೌಂಡೇಶನ್ನ ಡಾ. ಶಶಿಕಿರಣ್ ಶೆಟ್ಟಿ ಮಾತನಾಡಿ, ‘ಬೇರೆ ಬೇರೆ ಕಾರಣದಿಂದಾಗಿ ಆಶ್ರಮದಲ್ಲಿ ವಾಸವಾಗಿದ್ದಾರೆ. ಅವರ ಬಗ್ಗೆ ಅಯ್ಯೋ ಅನ್ನುವ ಅನುಕಂಪಕ್ಕಿಂತ ಅವರ ಮನಸ್ಸನ್ನು ಉಲ್ಲಾಸಗೊಳಿಸುಂಥ ಸಾಂಸ್ಕೃತಕ ಕಾರ್ಯಕ್ರಮ ‘ರಂಗ ಚೈತನ್ಯ’ವನ್ನು ಆಯೋಜಿಸುವ ಮೂಲಕ ಸುಮನಸಾ ಸಂಸ್ಥೆಯು ಉತ್ತಮ ಕೆಲಸ ಮಾಡಿದೆ’ಎಂದು ಶ್ಲಾಘಿಸಿದರು.
ಸುಮನಸಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿದ್ದರು.
ಸಮಾಜ ಸೇವಕ ಜನಾರ್ದನ ಕೊಡವೂರು, ಲೇಖಕಿ ಪೂರ್ಣಿಮಾ ಜನಾರ್ದನ, ಸುಮನಸಾ ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲ್, ಕಾರ್ಯಕ್ರಮ ಸಂಯೋಜಕರಾದ ವಿಜಯಾ ಭಾಸ್ಕರ್, ಗೀತಾ ಹರೀಶ್, ವಿಶೇಷ ಆಹ್ವಾನಿತರಾದ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಸಂದೀಪ್ ಶೆಟ್ಟಿ, ಉಪ್ಪೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುನಿಲ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಸುಂದರ ಪೂಜಾರಿ ಕೊಳಲಗಿರಿ ಉಪಸ್ಥಿತರಿದ್ದರು.
ಸೌಭಾಗ್ಯಲಕ್ಷ್ಮಿ ತಂತ್ರಿ ಪ್ರಾರ್ಥಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ ನಿರೂಪಿಸಿದರು. ಸುಮನಸಾ ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

