• Home  
  • ಪಡುಬಿದ್ರಿ ಅಬ್ಬೇಡಿಗೆ ಘನ ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ
- ಕರಾವಳಿ

ಪಡುಬಿದ್ರಿ ಅಬ್ಬೇಡಿಗೆ ಘನ ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ

Share: ಪಡುಬಿದ್ರಿ ಅಬ್ಬೇಡಿಗೆ ಘನ ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ  ಪಡುಬಿದ್ರಿ: ಜನನಿಬಿಡ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿರುವ ಪಡುಬಿದ್ರಿ ಗ್ರಾಪಂ ವಿರುದ್ಧ ಅಬ್ಬೇಡಿ ಬಳಿಯ ಹಳೇ ಎನ್‌ಟಿಪಿಸಿ ಗೋದಾಮು ಸುತ್ತಲಿನ ನಿವಾಸಿಗಳು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ.   ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಕಸ ವಿಲೇವಾರಿ ಘಟಕವನ್ನು ಗ್ರಾಪಂ ವ್ಯಾಪ್ತಿಯ ಹಳೇ ಎನ್‌ಟಿಪಿಸಿ ಗೋದಾಮು ಬಳಿಯ ೧೯ ಸೆಂಟ್ಸ್ ಜಾಗದಲ್ಲಿ ನಿರ್ಮಿಸಲು ಮುಂದಾಗಿತ್ತು. ಸುಜ್ಲಾನ್ ಪುನರ್ವಸತಿ ಪ್ರದೇಶ, ಅಬ್ಬೇಡಿ, ಅವರಾಲುಗಳ […]

ಪಡುಬಿದ್ರಿ ಅಬ್ಬೇಡಿಗೆ ಘನ ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ

 ಪಡುಬಿದ್ರಿ: ಜನನಿಬಿಡ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿರುವ ಪಡುಬಿದ್ರಿ ಗ್ರಾಪಂ ವಿರುದ್ಧ ಅಬ್ಬೇಡಿ ಬಳಿಯ ಹಳೇ ಎನ್‌ಟಿಪಿಸಿ ಗೋದಾಮು ಸುತ್ತಲಿನ ನಿವಾಸಿಗಳು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ.

  ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಕಸ ವಿಲೇವಾರಿ ಘಟಕವನ್ನು ಗ್ರಾಪಂ ವ್ಯಾಪ್ತಿಯ ಹಳೇ ಎನ್‌ಟಿಪಿಸಿ ಗೋದಾಮು ಬಳಿಯ ೧೯ ಸೆಂಟ್ಸ್ ಜಾಗದಲ್ಲಿ ನಿರ್ಮಿಸಲು ಮುಂದಾಗಿತ್ತು. ಸುಜ್ಲಾನ್ ಪುನರ್ವಸತಿ ಪ್ರದೇಶ, ಅಬ್ಬೇಡಿ, ಅವರಾಲುಗಳ ಜನವಸತಿ ಪ್ರದೇಶ, ಅಂಗನವಾಡಿ ಕೇಂದ್ರ ಹಾಗೂ ಸ್ಥಳೀಯ ನೀರು ಪೂರೈಕೆ ಮೂಲಗಳ ಬಳಿಯಲ್ಲೇ ತ್ಯಾಜ್ಯ ಘಟಕ ಸ್ಥಾಪಿಸಲು ಮುಂದಾಗಿರುವ ಪಡುಬಿದ್ರಿ ಗ್ರಾ. ಪಂ. ವಿರುದ್ಧ ಉಗ್ರ ಹೋರಾಟವನ್ನು ನಡೆಸುವ ತೀರ್ಮಾನವನ್ನು  ಸಭೆಯಲ್ಲಿ ಸ್ಥಳೀಯರು ಕೈಗೊಂಡಿದ್ದಾರೆ.

 ಹೋರಾಟ ಸಮಿತಿಯು ಸ್ಥಳೀಯರಾದ ಉಮಾನಾಥ ಪಡುಬಿದ್ರಿ, ಲೋಕೇಶ್ ಕಂಚಿನಡ್ಕ, ಮನೋಜ್ ಅಬ್ಬೇಡಿ, ಮಾಜಿ ತಾ.ಪಂ. ಸದಸ್ಯ ಭಾಸ್ಕರ ಪಡುಬಿದ್ರಿ, ಗ್ರಾ.ಪಂ. ಸದಸ್ಯರಾದ ನವೀನ್ ಎನ್. ಶೆಟ್ಟಿ, ಹರೀಶ್ ಶೆಟ್ಟಿ, ಜ್ಯೋತಿ ಮೆನನ್, ಗಣೇಶ್ ಕೋಟ್ಯಾನ್, ಮಹಮ್ಮದ್ ಶಾಫಿ, ನಿಯಾಜ್, ವಿದ್ಯಾಶ್ರೀ, ಶಕುಂತಳಾ, ಮೊಗವೀರ ಮುಂದಾಳು ಅಶೋಕ್ ಸಾಲ್ಯಾನ್, ಸ್ಥಳೀಯರಾದ ವಾಮನ ಟಿ. ಅಮೀನ್ ಮತ್ತಿತರ ಬೆಂಬಲಿಗರ ಉಪಸ್ಥಿತಿಯಲ್ಲಿ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದರು.

 ಗ್ರಾ. ಪಂ. ಸದಸ್ಯರ ವಿರೋಧ; ಎನ್‌ಟಿಪಿಸಿ ಗೋಡೌನ್ ಇರುವ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲು ಪಡುಬಿದ್ರಿ ಗ್ರಾ. ಪಂ. ಆಡಳಿತವು ಮುಂದಾದಾಗ ಗ್ರಾ. ಪಂ. ಸದಸ್ಯರಾಗಿ ತಾವು ಈ ನಿರ್ಣಯವನ್ನು ವಿರೋಧಿಸಿದ್ದೇವೆ. ಇದಾದ ಬಳಿಕ ಆ ಜಾಗದ ಆರ್‌ಟಿಸಿ ಬದಲಾವಣೆಯನ್ನೂ ಪಂಚಾಯಿತಿ ಆಡಳಿತ ನಮ್ಮ ಗಮನಕ್ಕೆ ತಂದಿಲ್ಲ. ಮೊನ್ನೆಯಷ್ಟೇ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾ. ಪಂ. ಕಾರ್ಯನಿರ್ವಹಣಾಧಿಕಾರಿಗಳು ಪಂಚಾಯಿತಿಗೆ ಬಂದಿದ್ದಾಗಲೂ ಈ ಕುರಿತಾಗಿ ತಮ್ಮ ವಿರೋಧವನ್ನು ಅವರಲ್ಲಿಯೂ ವ್ಯಕ್ತಪಡಿಸಿದ್ದೇವೆ. ಎಲ್ಲೂರು ಗ್ರಾಮದಲ್ಲಿ ಸುತ್ತಮುತ್ತಲಿನ ೫ ಗ್ರಾ. ಪಂ.ಗಳೂ ಸೇರಿದಂತೆ ಕಾಪು ಪುರಸಭೆಯ ತ್ಯಾಜ್ಯ ವಿಲೇವಾರಿಯನ್ನು ಕೈಗೊಳ್ಳವುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರಿದ್ದಾಗಲೇ ತೀರ್ಮಾನಿಸಲಾಗಿತ್ತು. ಈಗ ಅದನ್ನು ಕಡೆಗಣಿಸಲಾಗಿದೆ. ಇದು ಸಲ್ಲದು. ೧೦ಎಕ್ರೆ ಜಾಗವು ಎಲ್ಲೂರಿನಲ್ಲಿರುವಾಗ ಕೇವಲ ೧೯ಸೆಂಟ್ಸ್ ಸ್ಥಳದಲ್ಲಿ ಕಸ ವಿಲೇವಾರಿ ಘಟಕದ ಸ್ಥಾಪನೆ ತರವಲ್ಲ. ಈ ಕುರಿತಾಗಿ ಗ್ರಾ. ಪಂ. ವಿರುದ್ಧ ಸ್ಥಳೀಯರ ಹೋರಾಟದಲ್ಲಿ ತಾವೂ ಬೇಶರತ್ ಬೆಂಬಲ ಸೂಚಿಸುವುದಾಗಿ ಗ್ರಾ. ಪಂ. ಸದಸ್ಯ ನವೀನ್ ಎನ್. ಶೆಟ್ಟಿ ಹಾಗೂ ಹರೀಶ್ ಶೆಟ್ಟಿ ಹೇಳಿದರು.

ಗ್ರಾ. ಪಂ. ಗೆ ಮುಂದಿನ ಒಂದು ವಾರದೊಳಗಾಗಿ ಈ ಕುರಿತಾದ ಆದೇಶವನ್ನು ಹಿಂಪಡೆದು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯನ್ನು ಕೈಬಿಡುವಂತೆ ಮನವಿಯನ್ನು ನಾವು ಮಾಡಲಿದ್ದೇವೆ. ಇದನ್ನೂ ಗ್ರಾ. ಪಂ. ಸೇರಿದಂತೆ ಜಿಲ್ಲಾಡಳಿತವು ನಿರ್ಲಕ್ಷಿಸಿದಲ್ಲಿ ಉಗ್ರ ಹೋರಾಟವನ್ನು ಸಂಘಟಿಸುವುದಾಗಿ ಸ್ಥಳೀಯ ನಾಯಕರಾದ ಭಾಸ್ಕರ ಪಡುಬಿದ್ರಿ ಹಾಗೂ ಲೋಕೇಶ್ ಕಂಚಿನಡ್ಕ ಸಭೆಯಲ್ಲಿ ತಿಳಿಸಿದರು.

ಸಂಘಟಕ ಉಮಾನಾಥ ಪಡುಬಿದ್ರಿ ವಿಷಯ ಪ್ರಸ್ತಾವಿಸಿ ಈ ವಿಚಾರವಾಗಿಯೇ ರಾಜ್ಯ ಉಚ್ಚ ನ್ಯಾಯಾಲಯದಲ್ಲೂ, ಜಿಲ್ಲಾ ನ್ಯಾಯಾಲಯದಲ್ಲೂ ಹಿತಾಸಕ್ತಿಯ ದಾವೆಗಳು ವಿಚಾರಣೆಗೆ ಬಾಕಿ ಇವೆ. ಹಾಗಾಗಿ ಜಿಲ್ಲಾಧಿಕಾರಿ ಅವರು ಎನ್‌ಟಿಪಿಸಿ ಗೋದಾಮು ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯ ತಮ್ಮ ಆದೇಶವನ್ನು ಹಿಂಪಡೆಯಬೇಕು. ಪಾದೆಬೆಟ್ಟಿನಲ್ಲಿ ಎನ್‌ಟಿಪಿಸಿ ನಿರ್ಮಿಸಿದ್ದ ಅಧಿಕಾರಿಗಳ ನಿವಾಸಗಳ ಪ್ರದೇಶದಲ್ಲೋ, ಎಲ್ಲೂರಿನಲ್ಲೋ ಪಡುಬಿದ್ರಿ ಗ್ರಾ. ಪಂ. ನ ಕಸ ವಿಲೇವಾರಿಯನ್ನು ಮಾಡುವಂತೆ ನಿರ್ದೇಶಿಸಬೇಕು. ಬೆಳೆಯುತ್ತಿರುವ ಪಡುಬಿದ್ರಿಗಂತೂ ತ್ಯಾಜ್ಯ ವಿಲೇವಾರಿ ಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸುಜ್ಲಾನ್ ಕಾಲನಿ, ಕಂಚಿನಡ್ಕ, ಅಬ್ಬೇಡಿ, ಅವರಾಲುಗಳ ಸುಮಾರು ೧೦೦೦ಕ್ಕೂ ಅಧಿಕ ಮನೆಗಳಿರುವ ಜನನಿಬಿಡ ಪ್ರದೇಶದಲ್ಲಿ ಬೇಡ ಎಂದರು.

ಅಂತಿಮವಾಗಿ ತಕ್ಷಣ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿ ಘನ ತ್ಯಾಜ್ಯ ಘಟಕವನ್ನು ಸ್ಥಳಾಂತರಿಸುವಂತೆ ಆಗ್ರಹಿಸಲು ಮತ್ತು ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.