ಉಡುಪಿ ಚಿನ್ನಾಭರಣ ಘಟಕದಲ್ಲಿ ರಾಸಾಯನಿಕ ಹೊಗೆ ಪರಿಸರ ಅಧಿಕಾರಿಗಳಿಂದ ಪರಿಶೀಲನೆ: ನೋಟೀಸ್ ಜಾರಿ
ಉಡುಪಿ, ಜು.25: ರಾಸಾಯನಿಕ ಹೊಗೆ ಹೊಸಸೂಸುವ ವಿಚಾರವಾಗಿ ಇಂದು ಉಡುಪಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನಗರದ ಚಿನ್ನಾಭರಣ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟಕದ ಸುತ್ತಮುತ್ತ ಅಂಗಡಿ ಮುಗ್ಗಟ್ಟು, ದೇವಾಲಯ, ಮಸೀದಿ, ಸರಕಾರಿ ಶಾಲೆ, ವಸತಿ ಸಮುಚ್ಛಯಗಳಿದ್ದು ಇಲ್ಲಿ ಹೊರ ಸೂಸುವ ರಾಸಾಯನಿಕ ಹೊಗೆಯಿಂದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು.
ಈ ಹಿನ್ನೆಲೆ ಯಲ್ಲಿ ಮಾಹಿತಿ ಪಡೆದು ಬೆಳಗ್ಗೆ ಘಟಕಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ಚಿನ್ನಾಭರಣ ಘಟಕ ತಯಾರಿಸುವ ಹಾಗೂ ಹೊಗೆ ಸೂಸುವ ಅಂತಸ್ತಿಗೆ ಹೋಗಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದೆ.
ಈ ಬಗ್ಗೆ ಪತ್ರಿಕೆ ಜೊತೆ ಮಾತನಾಡಿದ ಮಂಡಳಿಯ ಉಡುಪಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ.ಕೆ.ಎಂ.ರಾಜು, ನಮ್ಮ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿನ್ನ ಇರುವ ಪೇಪರ್ ಗಳನ್ನು ಸುಟ್ಟಿರುವುದು ಕಂಡುಬಂದಿದೆ.
ಈ ಸಂಬಂಧ ಅವರಿಗೆ ನೋಟೀಸ್ ನೀಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

