ಪಲಿಮಾರಿನಲ್ಲಿ ಕಾಪು ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ, ದತ್ತಿ ನಿಧಿ ವಿತರಣೆ
ಪಡುಬಿದ್ರಿ, ಜು. ೨೯: ಪತ್ರಕರ್ತ ಓರ್ವ ನಿಷ್ಪಕ್ಷ ಧೋರಣೆಯ ನ್ಯಾಯಾಧೀಶನಾಗಿ ಇರಬೇಕು. ಅದು ಜನಸಾಮಾನ್ಯರ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ವಸ್ತು ನಿಷ್ಠ ವರದಿಯ ಮೂಲಕ ಜನಸೇವೆಯನ್ನು ಮಾಡುವ, ಸಮಾಜದ ಸ್ವಾಸ್ಥ್ಯವನ್ನು ಉಳಿಸುವ ಕೆಲಸವನ್ನು ಪತ್ರಕರ್ತರು, ಪತ್ರಿಕೆಗಳು ಮಾಡಬೇಕು ಎಂದು ಸಮಾಜವು ನಿರೀಕ್ಷಿಸುತ್ತದೆ ಎಂದು ಜಾನಪದ ವಿದ್ವಾಂಸ ಡಾ| ವೈ. ಎನ್. ಶೆಟ್ಟಿ ಪಡುಬಿದ್ರಿ ಹೇಳಿದರು.
ಅವರು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜುವಿನಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ ಹಾಗೂ ದತ್ತಿ ನಿಧಿ ವಿತರಣೆ ಕಾರ್ಯಕ್ರಮದಡಿ ದತ್ತಿ ನಿಧಿ ವಿತರಿಸಿ, ದತ್ತಿ ಉಪನ್ಯಾಸದಡಿ ಮಾತನಾಡಿದರು.
ಪತ್ರಿಕಾ ದಿನಾಚರಣೆಯ ಬಗ್ಗೆ ಉಪಾನ್ಯಾಸ ನೀಡಿದ ಪತ್ರಕರ್ತ ಪುಂಡಲೀಕ ಮರಾಠೆ ಅವರು, ಸಮಾಜದಲ್ಲಿನ ಒತ್ತಡಗಳನ್ನು ನಿಯಂಯಿಸಿಕೊಂಡು ಕಾರ್ಯನಿರ್ವಹಿಸುವ ಗುಣವನ್ನು ಪತ್ರಕರ್ತರು ಮೈ ಗೂಡಿಸಿಕೊಳ್ಳಬೇಕಿದೆ. ಪಿಯುಸಿ ಬಳಿಕ ಪತ್ರಿಕೋದ್ಯಮ ವಿಷಯದಲ್ಲೂ ವಿದ್ಯಾರ್ಥಿಗಳು ಪದವಿಯನ್ನು ಹೊಂದಬಹುದು. ಮುಂದೆ ಪತ್ರಕರ್ತರಾಗಿ ಸಮಾಜದಲ್ಲಿನ ಒತ್ತಡಗಳನ್ನು ಮೀರಿ, ರಾಷ್ಟೀಯ ಹಿತಾಸಕ್ತಿಯೊಂದಿಗೆ ನೀವೂ ಕಾರ್ಯನಿರ್ವಹಿಸಬಹುದು. ಸಮಾಜವೂ ನಿಮ್ಮನ್ನು ಆದರಿಸುತ್ತದೆ ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ಕಾಲಘಟ್ಟದ ಬಣ್ಣದ ಬದುಕಿಗೆ ಮಾರು ಹೋಗದೆ ಸಮಾಜದ ಸಾಮರಸ್ಯಕ್ಕೆ ಕೊಡುಗೆಯಾಗಿ ಬೆಳೆದು ನಿಲ್ಲುವ ಮೂಲಕ ಸುಂದರವಾದ ಭವಿಷ್ಯದ ಬದುಕು ಕಟ್ಟಿಕೊಳ್ಳಿರಿ ಎಂದು ಕರೆ ನೀಡಿದರು.
ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಪತ್ರಿಕೋದ್ಯಮವನ್ನು ನೀವೂ ನಿಮ್ಮ ಮುಂದಿನ ಪಠ್ಯ ವಿಷಯವಾಗಿ ಆರಿಸಿಕೊಳ್ಳಿರಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜಮಾಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ದಿ. ಜಯಂತ್ ಪಡುಬಿದ್ರಿ ದತ್ತಿನಿಧಿ ಪುರಸ್ಕಾರಗಳನ್ನು ಹಾಗೂ ದಿನಪತ್ರಿಕೆಗಳು, ಅಮೂಲ್ಯ ಮಾಹಿತಿಯುಳ್ಳ ಪುಸ್ತಕಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ ಉಪಸ್ಥಿತರಿದ್ದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಕಾರ್ಯದರ್ಶಿ ರಾಕೇಶ್ ಕುಂಜೂರು ಸ್ವಾಗತಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚೊಲ ವಂದಿಸಿದರು. ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿಜಯ ಆಚಾರ್ಯ ಉಚ್ಚಿಲ ನಿರೂಪಿಸಿದರು.

