ವ್ಯಸನಿಗಳಿಗೆ ಯಾವುದೇ ಧರ್ಮವಿಲ್ಲ :ದ. ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ ಎಂ.ಎನ್
ಬಂಟ್ವಾಳ : ವ್ಯಸನಿಗಳಿಗೆ ಯಾವುದೇ ಧರ್ಮವಿಲ್ಲ ಅವರಿಗೆ ವ್ಯಸನವೇ ಧರ್ಮ, ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದೆ ಎಂದು ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ ಎಂ.ಎನ್. ಹೇಳಿದರು.
ಅವರು ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ ನಡೆದ ಮಾದಕ ವಸ್ತುಗಳ ಬಳಕೆ ವಿರುದ್ಧ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ಅತಿಯಾದ ಒತ್ತಡ, ಅತಿಯಾದ ನಿರೀಕ್ಷೆ ಅಥವಾ ಮಕ್ಕಳ ಮೇಲಿನ ಕಾಳಜಿ ರಹಿತ ಪೋಷಕತ್ವ ಕೆಲವೊಮ್ಮೆ ಮಕ್ಕಳ ನೈಜ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ, ಮಗುವಿನ ಪರಿಪೂರ್ಣ ಬೆಳವಣಿಗೆಗೆ ಪೂರಕವಾದ ಪ್ರಾಥಮಿಕ ಶಿಕ್ಷಣ ನೀಡಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಫೀಕ್ ಮಾಸ್ಟರ್ ಮಾತನಾಡಿ, ದೇಶದ ಸಾಧಕರ ಪಟ್ಟಿಯಲ್ಲಿ ಇರಬೇಕಾದ ಯುವಜನತೆ ಕ್ಷಣಿಕ ಸುಖಕ್ಕಾಗಿ ಅಮಲು ಪದಾರ್ಥಗಳ ದಾಸರಾಗುತ್ತಿರುವುದು ದುರಂತ. ಇದನ್ನು ನಿವಾರಿಸಲು ಮನೆ ಮನೆಗಳಲ್ಲಿ ಮಾದಕ ವ್ಯಸನದ ಬಗ್ಗೆ
ಜಾಗೃತಿ ಉಂಟಾಗಬೇಕಾದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯುಕ್ತ ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ವಹಿಸಿದ್ದರು.
ಬಂಟ್ವಾಳ ಉಪ ತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಸಂಯುಕ್ತ ಜಮಾಅತ್ ಕೋಶಾಧಿಕಾರಿ ಹಾಜಿ ಪಿ.ಎಸ್.ಅಬ್ದುಲ್ ಹಮೀದ್ ವೇದಿಕೆಯಲ್ಲಿದ್ದರು.
ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಸ್ವಾಗತಿಸಿ, ಕಾರ್ಯದರ್ಶಿ ನೋಟರಿ ಕೆ. ಅಬೂಬಕರ್ ವಿಟ್ಲ ವಂದಿಸಿದರು.
ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕಾಧಕ್ಷ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

