ಅಪರೂಪದ ವ್ಯಕ್ತಿತ್ವದ ಹೃದಯವಂತ ಪತ್ರಕರ್ತ, ಲೇಖಕ ಶೇಖರ ಅಜೆಕಾರು ಇನ್ನಿಲ್ಲ
ಹೆಬ್ರಿ : ನಾಡಿನ ಖ್ಯಾತ ಹಿರಿಯ ಪತ್ರಕರ್ತ, ಸಾಹಿತಿ, ಲೇಖಕ, ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕುರ್ಪಾಡಿ ಆದಿಗ್ರಾಮೋತ್ಸವದ ರೂವಾರಿ ಅಜೆಕಾರಿನ ಹೆಸರನ್ನು ವಿಶ್ವದೆತ್ತರಕ್ಕೆ ಪಸರಿಸಿದ ಹೃದಯವಂತ ಡಾ. ಶೇಖರ ಅಜೆಕಾರು (54) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶೇಖರ ಅಜೆಕಾರು ಮಕ್ಕಳ ಸಾಹಿತ್ಯದ ಕುರಿತು ಹೆಚ್ಚು ಆಸಕ್ತಿ ವಹಿಸಿದ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಸಾವಿರಾರು ಹೊಸಮುಖ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದ್ದಾರೆ.
ಅವರು ಪತ್ನಿ, ಓರ್ವ ಮಗ ಓರ್ವ ಮಗಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಬಹುಮುಖ ಪ್ರತಿಭೆಯ ಶೇಖರ್ ಅಜೆಕಾರ್ ಅಪರೂಪದ ಛಾಯಗ್ರಾಹಕರಾಗಿದ್ದರು. ಸರಳ ವ್ಯಕ್ತಿತ್ವದ ವಿಶೇಷ ಯೋಚನೆ ಯೋಜನೆ ಪರಿಕಲ್ಪನೆಯ ಅಪರೂಪದ ಕಾರ್ಯಕ್ರಮಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದ್ದರು. ಸದಾ ಓದು ಬರಹಗಳಲ್ಲಿ ತೊಡಗುತ್ತ ನಿರಂತರವಾಗಿ ಅವರು 22 ಪುಸ್ತಕಗಳನ್ನು ಬರೆದಿದ್ದಾರೆ.
ಕಡಲಕಿನಾರೆ ಶ್ರವಣಬೆಳಗೋಳ, ಹೆಬ್ರಿ ಕಾರ್ಕಳ ಮೂಡಬಿದಿರೆ, ಕಾರ್ಕಳ ಗೊಮ್ಮಟ ಬೆಟ್ಟ ಸಹಿತ ನಾಡಿನ ೧೫ಕ್ಕೂ ಹೆಚ್ಚು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ ಸಾಹಿತಿಗಳಾದ ಅಂಬಾತನಯ ಮುದ್ರಾಡಿ, ಡಾ. ವೀರಪ್ಪ ಮೊಯಿಲಿ, ಡಾ. ದೊಡ್ಡರಂಗೇ ಗೌಡ, ಹರಿಕೃಷ್ಣ ಪುನರೂರು ಸಹಿತ ಹಲವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದಾರೆ.
ಮಕ್ಕಳ ಮೇಳ, ಅಂಗನವಾಡಿ ಮಕ್ಕಳ ಮೇಳ, ಶಿಕ್ಷಣ ಮಾಹಿತಿ ಶಿಬಿರ, ಬಸ್ ನಿಲ್ದಾಣಗಳಲ್ಲಿ ಅಪಘಾತ ಜಾಗೃತಿ ಛಾಯಚಿತ್ರ ಪ್ರದರ್ಶನ, ಕಾನನದಲ್ಲಿ ಕವಿಗೋಷ್ಠಿ, ಕವಿ ಸಮ್ಮೇಳನ, ವ್ಯಕ್ತಿತ್ವ ವಿಕಸನ ಶಿಬಿರ, ಮಕ್ಕಳಿಗೆ ಓದು ಬೆಳೆಸುವ ಕಾರ್ಯಗಾರ, ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತಿದ್ದರು.
ತನ್ನ ಕುಟುಂಬವನ್ನೇ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದರು. ಉಪನ್ಯಾಸಕ ದೀಪಕ್ ಎನ್ ದುರ್ಗ ಅವರು ಡಾ. ಶೇಖರ ಅಜೆಕಾರು ಅವರ ಜೀವನ ಚರಿತ್ರೆ ” ಅಜೆಕಾರಿನ ಅಜೆಕಾರು” ಪುಸ್ತಕ ಬರೆದಿದ್ದರು.
ಶೇಖರ್ ಅಜೆಕಾರು ಅವರು ಕುಂದಪ್ರಭ ವಾರಪತ್ರಿಕೆಯಲ್ಲಿ ಬರಹಗಾರರಾಗಿ ತಮ್ಮ ಪ್ರಯಣ ಪ್ರಾರಂಭಿಸಿದರು. ಮುಂಬೈನ ‘ಕರ್ನಾಟಕ ಮಲ್ಲ’, ಜನವಾಹಿನಿ, ಡೈಜಿವರ್ಲ್ಡ್, ಕನ್ನಡಪ್ರಭ ಮತ್ತು ಉಷಾ ಕಿರಣಗಳಲ್ಲೂ ಸೇವೆ ಸಲ್ಲಿಸಿದ್ದಾರೆ.
10 ವರ್ಷಗಳ ಕಾಲ ಪತ್ರಕರ್ತರ ವೇದಿಕೆ ಬೆಂಗಳೂರಿನ ಉಡುಪಿ ಶಾಖೆಯ ಅಧ್ಯಕ್ಷರೂ ಆಗಿದ್ದರು. ಹೆಬ್ರಿ ಪತ್ರಕರ್ತರ ಸಂಘವನ್ನು ಸ್ಥಾಪಿಸಿದ್ದರು. ಮುಂಬಯಿ ಕನ್ನಡ ಶಾಲೆಯನ್ನು ಆರಂಭಿಸಿದ್ದರು.
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಅಗ್ನಿ ಶಿಖಾಮಂಚ್ ಪ್ರಶಸ್ತಿ, ಆದರ್ಶ ಪತ್ರಕರ್ತ ಪ್ರಶಸ್ತಿ, ಭಾರತ ಸೇವಾರತ್ನ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಮಾಧ್ಯಮ ರತ್ನ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಗೌರವವನ್ನು ಪಡೆದಿದ್ದಾರೆ. ಹಲವಾರು ಮಂದಿ ಯುವ ಪತ್ರಕರ್ತರನ್ನು ನಾಡಿಗೆ ಪರಿಚಯಿಸಿದ್ದಾರೆ.
ಅಕಾಲಿಕವಾಗಿ ನಿಧನರಾಗಿದ್ದ ಪತ್ರಕರ್ತ ರಾಜೇಶ್ ಶಿಬಾಜೆ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ನಾಡಿನ ಹಲವಾರು ಸಾಧಕ ಪತ್ರಕರ್ತರಿಗೆ “ರಾಜೇಶ್ ಶಿಬಾಜೆ ಪ್ರಶಸ್ತಿ”ಯನ್ನು ನೀಡುತ್ತ ಬಂದಿದ್ದಾರೆ.
ಮುಂಬಯಿಯ ಎನ್ ಕೌಂಟರ್ ದಯಾ ನಾಯಕ್ ಅವರನ್ನು ಕನ್ನಡ ಮಾಧ್ಯಮದ ಮೂಲಕ ಕನ್ನಡ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆಯೂ ಶೇಖರ ಅಜೆಕಾರು ಅವರಿಗೆ ಸಲ್ಲುತ್ತದೆ.
ಡಾ. ಎಂ.ವಿ. ಕಾಮತ್, ಬಿ.ಸಿ.ರಾವ್ ಶಿವಪುರ ಸಹಿತ ನಾಡಿನ ಹಿರಿಯ ಪತ್ರಕರ್ತರನ್ನು ಅವರ ಮನೆಗೆ ಹೋಗಿ ಪತ್ರಿಕಾ ದಿನದ ಗೌರವ ನೀಡಿ ಗೌರವಿಸುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದರು.
ಕವಿ ಸಾಹಿತಿಯಾಗಿ ಮೈಸೂರು ದಸರ ಸೇರಿ ನೂರಾರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಿದ್ದ ಶೇಖರ್ ಮಕ್ಕಳಿಗೆ ನಿರಂತರವಾಗಿ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪ್ರೇರಣೆ ನೀಡಲು ಅತ್ಯುತ್ತಮವಾಗಿ ಮಾತನಾಡುತ್ತಿದ್ದರು. ಪುಸ್ತಕ ಹಂಚುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಘಟಕದ ಅಧ್ಯಕ್ಷರಾಗಿ ವಿವಿಧ ಸಮ್ಮೇಳನಗಳನ್ನು ನಡೆಸಿದ್ದಾರೆ.
ಅಜೆಕಾರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ.
ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡು ರಾಜ್ಯದಲ್ಲಿ ಖ್ಯಾತಿ ಗಳಿಸಿದ ಶೇಖರ ಅಜೆಕಾರು ಎಲ್ಲರನ್ನು ನಗುಮುಖದಿಂದ ಕರೆದು ಮಾತನಾಡುತ್ತ, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅತೀ ಹೆಚ್ಚು ಜನಸಂಪರ್ಕವನ್ನು ಹೊಂದಿದ್ದರು.
ಒಂದೆರಡು ದಿನಗಳ ಹಿಂದೆ ನಡೆದ ಉಡುಪಿಯ ವಿಶ್ವ ಬಂಟರ ಸಮಾವೇಶದಲ್ಲಿ ಲವಲವಿಕೆಯಿಂದ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಅದು ಶೇಖರ ಅಜೆಕಾರು ಅವರು ಭಾಗವಹಿಸಿದ ಕೊನೆಯ ಕಾರ್ಯಕ್ರಮ.
ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿ ಇಂದು ಶೇಖರ ಅಜೆಕಾರು ನಮ್ಮಿಂದ ಮರೆಯಾಗಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ: ವಿವಿಧ ಪತ್ರಿಕೆಗಳಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಶೇಖರ್ ಅಜೆಕಾರ್ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ರಜತ ಮಹೋತ್ಸವ ಸಮಿತಿಯ ಸಂಚಾಲಕ ಶರೀಫ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂತಾಪ: ಹಿರಿಯ ಪತ್ರಕರ್ತ ಶೇಖರ್ ಅಜೆಕಾರ್ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಕಾರ್ಯದರ್ಶಿ ಸಂತೋಷ್ ಕಾಪು, ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಜಿಲ್ಲಾ ಸಮಿತಿ ಸದಸ್ಯರು, ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

