ಬೈಂದೂರಿನ ಉದ್ಯಮಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣ: ವಂಚಕಿ ಚೈತ್ರಾ ತಂಡದ ವಿರುದ್ಧ ಮುಂದಿನ ವಾರ ನ್ಯಾಯಾಲಯಕ್ಕೆ ಚಾರ್ಜ್ಶಿಟ್ ಸಾಧ್ಯತೆ
(Bengaluru, Emedia kannada) ಬೆಂಗಳೂರು : ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ (Govinda Babu Poojary) ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 7 ಕೋಟಿ ರೂಪಾಯಿ ವಂಚಿಸಿದ ಚೈತ್ರಾ ಮತ್ತು ಗ್ಯಾಂಗ್ ವಿರುದ್ಧ ಸಿಸಿಬಿ ತನಿಖೆ ಪೂರ್ಣಗೊಂಡಿದ್ದು, ಡೀಲ್ ಸಂಬಂಧ 68 ಸಾಕ್ಷ್ಯಗಳನ್ನ ಕಲೆ ಹಾಕಿದೆ. ಸಿಸಿಬಿ ಪೊಲೀಸರು ಮುಂದಿನ ವಾರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (Next Week Charge Sheet) ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಚೈತ್ರಾ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬರೋಬ್ಬರಿ 4.11 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 7 ಆರೋಪಿಗಳ ವಿರುದ್ಧ ಸಿಸಿಬಿ, ಚಾರ್ಜ್ಶೀಟ್ಗೆ ತಯಾರಿ ಮಾಡಿಕೊಂಡಿದೆ. ಆರೋಪಿಗಳ ವಂಚನೆ ಕುರಿತಾಗಿ ಪ್ರಾಥಮಿಕ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ಸಾಂದರ್ಭಿಕ ಸಾಕ್ಷ್ಯ ಕಲೆಹಾಕಲಾಗಿದೆ.
ಗೋವಿಂದ ಬಾಬು ಪೂಜಾರಿ ಬಳಿಯಿದ್ದ ಎಲ್ಲಾ ಆಡಿಯೋ, ವಿಡಿಯೋವನ್ನು ತನಿಖಾ ತಂಡ ಪಡೆದಿದೆ. ಗೋವಿಂದ ಪೂಜಾರಿ ಬಳಿಯೇ ಡೀಲ್ ಸಂಬಂಧ 10 ವಿಡಿಯೋ ಪಡೆಯಲಾಗಿದೆ. ಆರೋಪಿಗಳ ಮೊಬೈಲ್ಗಳ ಡೇಟಾ ರಿಟೀವ್ ವರದಿ ಕೂಡ ಚಾರ್ಜ್ಶೀಟ್ ನಲ್ಲಿ ಉಲ್ಲೇಖಿಸಲಾಗುತ್ತದೆ. ಆರೋಪಿಗಳ ಮೊಬೈಲ್ ಚಾಟ್, ಕರೆಗಳ ಸಂಬಂಧ ಡೇಟಾ ರಿಟೀವ್ ಮಾಡಲಾಗಿದೆ. ಸದ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

