ಬಿ.ಸಿ.ರೋಡು: ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಿದ ಆರೋಪಿಗಳಿಬ್ಬರ ಬಂಧನ
(Bantwala) ಬಂಟ್ವಾಳ: ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿಯ ಅಂಗಡಿಯೊಂದರಲ್ಲಿದ್ದ ಮಹಿಳೆಯೋರ್ವರ ಕುತ್ತಿಗೆಯಿಂದ ಅಪರಿಚಿತರಿಬ್ಬರು ಒಂದೂವರೆ ಪವನಿನ ಚಿನ್ನದ ಸರ ಕಸಿದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ಬೈಕಂಪಾಡಿಯ ಅಶೋಕ( 34), ಮಂಗಳೂರು ದಂಬೇಲ್ ನಿವಾಸಿ ಸಚ್ಚಿನ್ (34) ಎಂದು ಹೆಸರಿಸಲಾಗಿದೆ.
ಬಂಧಿತರಿಂದ ಒಂದೂವರೆ ಪವನಿನ ಚಿನ್ನದ ಸರ ಮತ್ತು ಬೈಕನ್ನು ವಶಪಡಿಸಲಾಗಿದೆ.
ಡಿ.14 ರಂದು ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿರುವ ಶ್ರೀಮಹಾಲಕ್ಷ್ಮಿ ಸ್ಟೋರ್ ಗೆ ಮಧ್ಯಾಹ್ನ 2.30 ರ ಹೊತ್ತಿಗೆ ಬೈಕ್ ನಲ್ಲಿ ಬಂದ ಅಪರಿಚಿತರಿಬ್ಬರು ವಿಮಲ್ ಹಾಗೂ ಚಾಕಲೇಟ್ ಪಡೆದುಕೊಂಡು 40 ರೂ ನೀಡಿದ್ದು, ಚಿಲ್ಲರೆ ನೀಡುವ ಉದ್ದೇಶದಿಂದ ಮಾಲಕಿ ಸರೋಜಿನಿ ಅವರು ಕ್ಯಾಶ್ ಕೌಂಟರ್ ಗೆ ಬಗ್ಗಿದಾಗ ಅವರ ಕುತ್ತಿಗೆಯಿಂದ ಚೈನ್ ಎಗರಿಸಿ ಪರಾರಿಯಾಗಿದ್ದರು.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ಅವರ ನಿರ್ದೇಶನದಂತೆ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ರಾಮಕೃಷ್ಣ, ಕಲೈಮಾರ್ ಪಿ ಮತ್ತವರ ಸಿಬ್ಬಂದಿಗಳು ಬೆಂಜನಪದವಿನ ಕರಾವಳಿ ಸೈಟ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿಯಶಸ್ವಿಯಾಗಿದ್ದಾರೆ.
ಸಿಬ್ಬಂದಿಗಳಾದ ಇರ್ಷಾದ್ ಪಿ, ರಾಜೇಶ್ ಎಸ್, ಗಣೇಶ್ ಎನ್, ಮೋಹನ ವೈ. ಎ , ವಿವೇಕ್ ಕೆ. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ.
ಈ ಕೃತ್ಯಕ್ಕೆ ಸಂಬಂಧಿಸಿ ಅರೋಪಿಗಳ ಯಾವುದೇ ಸುಳಿವು ಇರಲಿಲ್ಲ, ಘಟನಾ ಸ್ಥಳದಲ್ಲಿ ಸಿಸಿ ಕ್ಯಾಮರ ಕೂಡ ಇರದಿದ್ದು, ವಾರದೊಳಗೆ ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ ನಗರ ಠಾಣೆಯ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಹಾಗೂ
ತಂಡಕ್ಕೆ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿರುತ್ತಾರೆ.

