ಸುಜ್ಲಾನ್ ಕಂಪನಿ ವಿರುದ್ಧ ಭೂ ಮಾಫಿಯಾ ಆರೋಪ: ಪಡುಬಿದ್ರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಪಡುಬಿದ್ರಿ: ಕೆಐಎಡಿಬಿಯಿಂದ ಭೂಸ್ವಾಧೀನಗೊಳಿಸಿ ಪಡೆದುಕೊಂಡಿರುವ 1200ಎಕರೆ ಜಮೀನನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ, ನಂದಿಕೂರಿನ ಸುಜ್ಲಾನ್ ಕಂಪೆನಿ ವಿರುದ್ಧ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಸುಜ್ಲಾನ್ ಯೋಜನೆ ಮುಂಬಾಗದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪ್ರತಿಭಾ (Kaup Thahashildar Prathibha) ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪಲಿಮಾರು, ಪಡುಬಿದ್ರಿ ನಂದಿಕೂರು ಪರಿಸರದಲ್ಲಿ ಸುಜ್ಲಾನ್ ಎನರ್ಜಿ ಇಂಡಿಯಾ (Suzlon Energy India)ಪ್ರೈವೇಟ್ ಲಿಮಿಟೆಡ್ ಗೆ ಕೆಐಎಡಿಬಿಯಿಂದ ಮಂಜೂರಾದ 1200 ಎಕರೆ ಜಮೀನನ್ನು ಭೂ ಮಾಫಿಯಾದ ಜೊತೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದೆ. ಹೆಚ್ಚುವರಿ ಜಮೀನನ್ನು ಸರ್ಕಾರ ಹಿಂಪಡೆದು ಪಲಿಮಾರು ಮತ್ತು ಪಡುಬಿದ್ರಿ ಗ್ರಾಮದಲ್ಲಿ ನಿವೇಶನಕ್ಕಾಗಿ ಅರ್ಜಿಸಲ್ಲಿಸಿದವರಿಗೆ ಪ್ರಥಮ ಆದ್ಯತೆಯಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪೆನಿಗಳಲ್ಲಿ 70 ಶೇಕಡಾ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ದೇವರ ಕಾಡು ಪುನರ್ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಕೃಷಿ ಉದ್ದೇಶಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಿ ನಿರ್ಮಿಸಿರುವ ಪಲಿಮಾರು ಕಿಂಡಿ ಅಣೆಕಟ್ಟೆಯಿಂದ ಸುಜ್ಲಾನ್ ಪ್ರದೇಶದ ಘಟಕಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸಿ ಕೃಷಿಕರ ಹಿತಾಸಕ್ತಿ ಕಾಪಾಡಬೇಕು. ಹೆಜಮಾಡಿ ಟೋಲ್ನಲ್ಲಿ ಪಡುಬಿದ್ರಿ ಜಿಪಂ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ಶುಲ್ಕ ವಿನಾಯಿತಿ ಹಾಗೂ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕೇಂದ್ರ ಹುನ್ನಾರವನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಎ. ಗಫೂರ್ (MA Gafoor), ಉದಯಕುಮಾರ್ ಶೆಟ್ಟಿ (Udaykumar Shetty), ಅಂಶುಮತ್, ಪ್ರತಿಭಾ ಕುಳಾಯಿ (Prathibha Kulai), ಸುಧೀರ್ ಮರೋಳಿ (Sudhirkumar Maroli), ಐವನ್ ಡಿಸೋಜ (Ivan Desoz’a) ಮತ್ತಿತರರು ಮಾತನಾಡಿದರು.
ಕಾಂಗ್ರೆಸ್ ಪ್ರಮುಖರಾದ ನವೀನಚಂದ್ರ ಸುವರ್ಣ, ಸಂತೋಷ್ ಕುಲಾಲ್, ಪ್ರಸಾದ್ರಾಜ್ ಕಾಂಚನ್ (Prsadraj Kanchan), ದಿನೇಶ್ ಹೆಗ್ಡೆ ಮೊಳಹಳ್ಳಿ, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲು (Kishan Hegde Kolkebail), ಮಲ್ಯಾಡಿ ಶಿವರಾಮ ಶೆಟ್ಟಿ, ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ದೀಪಕ್ ಕೋಟ್ಯಾನ್, ದಿವಾಕರ ಶೆಟ್ಟಿ ಕಾಪು, ವಿಶ್ವಾಸ್ ಅಮೀನ್, ಶಾಂತಲತಾ ಶೆಟ್ಟಿ, ಶರ್ಪುದ್ದೀನ್ ಶೇಖ್, ರಮೀಜ್ ಹುಸೇನ್, ಮೊಹಮ್ಮದ್ ಸಾಧಿಕ್, ಸುಧೀರ್ ಕರ್ಕೇರ, ಜಿತೇಂದ್ರ ಪುರ್ಟಾಡೊ, ಡೇವಿಡ್ ಡಿಸೋಜ (David Dsouz’a), ಅಶ್ವಿನಿ, ಶಶಿಧರ ಶೆಟ್ಟಿ ಎಲ್ಲೂರು ಮತ್ತಿತರರು ಇದ್ದರು. ದಿನೇಶ್ ಕೋಟ್ಯಾನ್ ನಿರೂಪಿಸಿದರು.

