ಬಂಟ್ವಾಳ ಕಾರು ಡಿಕ್ಕಿ: ಯುವತಿ ಮೃತ್ಯು , ಕಾರಿನಲ್ಲಿದ್ದ ಮೂವರು ಪರಾರಿ
(Bantwala) ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪಚ್ಚಿನಡ್ಕ ಎಂಬಲ್ಲಿ ಕಾರೊಂದು ಡಿಕ್ಕಿಯಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದ್ದು, ಈ ಘಟನೆಯ ಹಿಂದೆ ಗಾಂಜಾ ಘಾಟು ಅವರಿಸಿದ್ದು, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯ ಕೇಳಿ ಬಂದಿದೆ.
ಸ್ಥಳೀಯ ನಿವಾಸಿ ದಿ. ಬಾಸ್ಕರ ಆಚಾರ್ಯ ಅವರ ಪುತ್ರಿ ಚೈತ್ರಾ ( 22) ಮೃತಪಟ್ಟ ದುರ್ದೈವಿ ಯುವತಿಯಾಗಿದ್ದಾಳೆ.
ರಾತ್ರಿ ಸುಮಾರು 8 ಗಂಟೆಯ ವೇಳೆ ಅಪಘಾತ ಸಂಭವಿಸಿದ್ದು,ಜೀvನ್ಮರಣ ಹೋರಾಟ ನಡೆಸುತ್ತಿದ್ದ ಈಕೆ ಮಧ್ಯರಾತ್ರಿಯ ವೇಳೆ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ ತನ್ನ ಸ್ನೇಹಿತೆಯೋರ್ವಳ ಮದುವೆಯ ರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿ ಮನೆಯಿಂದ ತಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಧಾವಿಸಿ ಬಂದ ಸ್ವಿಪ್ಟ್ ಕಾರೊಂದು ಈಕೆಗೆ ಡಿಕ್ಕಿ ಹೊಡೆದಿದೆ ಎಂದು ಚೈತ್ರಾಳ ಸಂಬಂಧಿಕರು ತಿಳಿಸಿದ್ದಾರೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಇವಳನ್ನು ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಟ್ರಾಫಿಕ್ ಎ.ಎಸ್.ಐ. ಸುರೇಶ್ ಪಡಾರ್, ಹಾಗೂ ಹೆಚ್.ಸಿ. ರಮೇಶ್ ಅವರು ಖಾಸಗಿ ವಾಹನದ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಮೂವರು ಪರಾರಿ:
ಚೈತ್ರಾಳಿಗೆ ಡಿಕ್ಕಿ ಹೊಡೆದ ಕಾರು ಬಳಿಕ ನಿಯಂತ್ರಣ ಕಳೆದುಕೊಂಡು ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಬಡಿದು, ಮನೆಯೊಂದರ ಕಾಂಪೌಂಡ್ ಗೆ ತಾಗಿ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಳಿಕ ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಸಹ ಪ್ರಯಾಣಿಕರು ಸಹಿತ ಮೂವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಬಂಟ್ವಾಳ ಟ್ರಾಫಿಕ್ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ,ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದುವೆಗೆ ನಿಶ್ಚಿತಾರ್ಥ ಆಗಿತ್ತು:
ಚೈತ್ರ ಮಂಗಳೂರಿನ ಪ್ರಸಿದ್ದ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈಕೆಗೆ ಕೊಡ್ಯಡ್ಕದ ಯುವಕನೋರ್ವನ ಜೊತೆ ಮದುವೆಗೆ ದಿನ ಕೂಡ ನಿಗದಿಯಾಗಿದೆಯೆನ್ನಲಾಗಿದೆ. ನೂರು ಕನಸು ಹೊತ್ತು ವಿವಾಹವಾಗಿ ಗಂಡನ ಮನೆ ಸೇರಬೇಕಾಗಿದ್ದ ಚೈತ್ರಾ ಕಾರೊಂದು ಮಸಣ ಸೇರುವಂತೆ ಮಾಡಿದೆ.
*ಗಾಂಜಾ ವ್ಯಸನಿಗಳಾ?
ಗಾಂಜಾ ಸೇವನೆ ಮಾಡಿ ಕಾರು ಓಡಿಸುತ್ತಿದ್ದುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಗಂಭೀರ ಆರೋಪ ಸ್ಥಳೀಯರಿಂದ ಕೇಳಿಬಂದಿದ್ದು, ಈ ಬಗ್ಗೆ ಕಾರಿನಲ್ಲಿದ್ದ ಮೂವರನ್ನು ಬಂಧಿಸಿ ಸಮಗ್ರ ತನಿಖೆ ನಡೆಸುವಂತೆ ಚೈತ್ರಾಳ ಸಂಬಂಧಿಕರು ಸಹಿತ ಹಿ.ಜಾ.ವೇ. ಬಂಟ್ವಾಳ ಘಟಕ ಮತ್ತು ಸ್ಥಳೀಯರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

