ಮಣಿಪಾಲದಲ್ಲಿ ಜನವರಿ 4ರಿಂದ ಗ್ಲೋಬಲ್ ಹೆಲ್ತ್ ಕೇರ್ ಸಮ್ಮಿಟ್
ಮಣಿಪಾಲ: ಭಾರತೀಯ ಸಂಜಾತ ಅಮೆರಿಕನ್ ವೈದ್ಯರ ಒಕ್ಕೂಟದ ವತಿಯಿಂದ (ಎಎಪಿಐ) ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ಹೊಟೇಲ್‌ನಲ್ಲಿ ಜನವರಿ 4 ರಿಂದ 6ರ ವರೆಗೆ ಗ್ಲೋಬಲ್ ಹೆಲ್ತ್ ಕೇರ್ ಸಮ್ಮಿಟ್ ನಡೆಯಲಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ. ಎಸ್ ಎಸ್ ಬಲ್ಲಾಳ್ (Prof. Chancelor Dr. SS Ballal) ಹೇಳಿದ್ದಾರೆ.
ಅವರು ಮಣಿಪಾಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜನವರಿ 4ರಂದು ನೋಂದಣಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜನವರಿ 5ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಾಹೆ ವಿ.ವಿ.ಯ ಕುಲಾಧಿಪತಿ ಪದ್ಮಭೂಷಣ ಡಾ। ರಾಮದಾಸ್ ಪೈ (DR Ramdas Pai) ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ (DCM DK Shivkumar) ನೀಡಿ ಗೌರವಿಸಲಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ನೈಪುಣ್ಯ ಹೊಂದಿರುವ, ಭವಿಷ್ಯದಲ್ಲಿ ಆರೋಗ್ಯ ರಕ್ಷಣೆಗೆ ಬೇಕಾದ ಎಐ ತಂತ್ರಜ್ಞಾನದ ಕುರಿತಾದ ಚರ್ಚೆ ಸಹಿತ ವೈದ್ಯಕೀಯ ಕ್ಷೇತ್ರದ ಹಲವು ಜಾಗತಿಕ ವಿಷಯಗಳು, ತಾಂತ್ರಿಕ, ತಾಂತ್ರಿಕೇತರ ವಿಚಾರಗಳು, ಸಮಸ್ಯೆಗಳ ಕುರಿತು ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ. ಜತೆಗೆ ಸಂವಾದ, ವಿವಿಧ ಚರ್ಚಾಗೋಷ್ಠಿ ನಡೆಯಲಿವೆ ಎಂದೂ ಡಾ.ಎಸ್ ಎಸ್ ಬಲ್ಲಾಳ್ ಮಾಹಿತಿ ನೀಡಿದರು

